ಯೋಧರೊಂದಿಗೆ ಮೋದಿ ದೀಪಾವಳಿ | ಶತ್ರು ರಾಷ್ಟ್ರಗಳಿಗೆ ಖಡಕ್ ಎಚ್ಚರಿಕೆ

ಲೊಂಗೆವಾಲ(ರಾಜಸ್ಥಾನ): ಭಾರತವನ್ನು ಕೆಣಕಿದರೆ, ಅಷ್ಟೇ ತೀಕ್ಷ್ಣ ಪ್ರತಿಕ್ರಿಯೆ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಶತ್ರು ರಾಷ್ಟ್ರಗಳಿಗೆ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಲೊಂಗೆವಾಲ್ ಪೊಸ್ಟ್‍ನಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ಮೋದಿಯವರು, ವಿಸ್ತರಣಾ ಪಡೆಗಳಿಂದ ಜಗತ್ತು ತೊಂದರೆ ಎದುರಿಸುತ್ತಿದ್ದು, ಇದು 18ನೇ ಶತಮಾನದಲ್ಲಿದ್ದಂತಹ ವಿಕೃತ ಮನಸ್ಸನ್ನು ಅನಾವರಣಗೊಳಿಸುತ್ತದೆ ಎಂದು ಚೀನಾ ಹೆಸರಿಸದೆ ಕುಟುಕಿದ್ದಾರೆ.
ವಿಸ್ತರಣಾ ಪಡೆಗಳ ವಿರುದ್ಧ ಬಲವಾದ ಧ್ವನಿಯಾಗಿ ಭಾರತ ಹೊರಹೊಮ್ಮಿದ್ದು, ಇದಕ್ಕೆ ತೀಕ್ಷ್ಣ ರೀತಿಯಲ್ಲಿ ಪ್ರತಿಕ್ರಿಯೆಯನ್ನೂ ನೀಡುತ್ತಿದೆ ಎಂದಿದ್ದಾರೆ.
ಭಯೋತ್ಪಾದಕತೆಯ ಪ್ರಾಯೋಜಕರಿಗೆ ಅವರದೇ ಮನೆಗೆ ನುಗ್ಗಿ ಭಾರತೀಯ ಸೈನಿಕರು ಹೊಡೆದಿದ್ದಾರೆ ಎಂದು ನೆರೆ ರಾಷ್ಟ್ರದಲ್ಲಿನ ಉಗ್ರ ತಾಣಗಳ ವಿರುದ್ಧದ ವಾಯು ಮತ್ತು ಸೀಮಿತ ದಾಳಿಯನ್ನು ಉಲ್ಲೇಖಿಸಿ ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡಿದ್ದಾರೆ.
ನಮ್ಮ ಗಡಿಗಳನ್ನು ರಕ್ಷಿಸುವುದರಿಂದ ನಮ್ಮ ಧೈರ್ಯಶಾಲಿ ಸೈನಿಕರನ್ನು ಜಗತ್ತಿನ ಯಾವುದೇ ಪಡೆಯು ತಡೆಗಟ್ಟಲು ಸಾಧ್ಯವಿಲ್ಲ. ಏನೇ ಆಗಲಿ ನಮಗೆ ಸೇರಿದ ಒಂದು ಚೂರು ಭೂಮಿಯನ್ನು ಬಿಟ್ಟುಕೊಡುವುದಕ್ಕೂ ನಾವು ರಾಜಿಯಾಗುವುದಿಲ್ಲ ಎನ್ನುವುದು ಇಂದು ಜಗತ್ತಿಗೆ ಅರಿವಾಗಿದೆ ಎಂದಿದ್ದಾರೆ.
ಬೇರೆ ದೇಶಗಳನ್ನು ಅರ್ಥೈಸಿಕೊಳ್ಳುವ ನೀತಿಯಲ್ಲಿ ಭಾರತ ಇಂದು ನಂಬಿಕೆ ಹೊಂದಿದೆ. ಇದೇ ವೇಳೆ ನಮ್ಮನ್ನು ಕಾಲು ಕೆರೆದುಕೊಂಡು ಕೆಣಕುವವರಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡುವುದನ್ನೂ ಅರ್ಥೈಸಿದೆ. ನಮಗೆ ಸವಾಲೊಡ್ಡುವವರಿಗೆ ಪ್ರತಿಕ್ರಿಯೆ ನೀಡುವ ಸಾಮಥ್ರ್ಯ ಮತ್ತು ರಾಜಕೀಯ ಇಚ್ಛಾಶಕ್ತಿಯನ್ನೂ ದೇಶ ಹೊಂದಿದೆ ಎಂದು ಮೋದಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ