ಯೋಧರ ಜತೆ ಮೋದಿ ಇಂದು ದೀಪಾವಳಿ

ಹೊಸದಿಲ್ಲಿ: ದೇಶದ ಯೋಧರೊಂದಿಗೆ ದೀಪಾವಳಿ ಆಚರಿಸುವ ರೂಢಿಯನ್ನು ಮುಂದುವರಿಸುತ್ತ, ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಗಡಿ ಪ್ರದೇಶಕ್ಕೆ ತೆರಳಿ ಶನಿವಾರ ಸೈನಿಕರೊಂದಿಗೆ ಹಬ್ಬ ಆಚರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜತೆಗೆ ಪ್ರಧಾನಿಯೊಂದಿಗೆ ಸೇನಾ ಸಿಬ್ಬಂದಿ ಮುಖ್ಯಸ್ಥ ಜ.ಬಿಪಿನ್ ರಾವತ್ ಕೂಡ ತೆರಳಿದ್ದಾರೆ ಎಂದು ಮಾಹಿತಿ ನೀಡಿವೆ.
ಈ ಬೆನ್ನಲ್ಲೇ ಮೋದಿ ಸೈನಿಕರ ಕುರಿತಾಗಿ ಟ್ವೀಟ್ ಮಾಡಿದ್ದು, ಈ ಬಾರಿ ಸೈನಿಕರಿಗಾಗಿ ದೀಪ ಹಚ್ಚುವ ಮೂಲಕ ಗೌರವ ಸಲ್ಲಿಸೋಣ ಎಂದು ಹೇಳಿದ್ದಾರೆ. ತಮ್ಮ ಜೀವದ ಬಗ್ಗೆ ಲೆಕ್ಕಿಸದೇ, ನಿರ್ಭಯವಾಗಿ ದೇಶದ ಗಡಿ ಸಂರಕ್ಷಿಸುತ್ತಿರುವ ಯೋಧರಿಗಾಗಿ ದೀಪಾವಳಿಯೆಂದು ದೀಪ ಹಚ್ಚೋಣ. ಸೈನಿಕರು ಗಡಿ ಕಾಯುತ್ತಿರುವುದರಿಂದಲೇ ಇಂದು ನಾವೆಲ್ಲರೂ ನಮ್ಮ ಕುಟುಂಬದೊಂದಿಗೆ ಹಬ್ಬ ಆಚರಿಸಲು ಸಾಧ್ಯವಾಗಿದ್ದು, ದೀಪದ ಮೂಲಕ ಸೈನಿಕರಿಗೆ ಕೃತಜ್ಞತೆ ಸಲ್ಲಿಸೋಣ ಎಂದಿದ್ದಾರೆ.
ಮೋದಿ ಪ್ರಧಾನಿಯಾಗಿ ಅಕಾರಕ್ಕೇರಿದ ಸಮಯದಿಂದಲೂ ಪಾಕಿಸ್ಥಾನ ಹಾಗೂ ಚೀನಾ ಜತೆಗೆ ಭಾರತ ಹೊಂಚಿಕೊಂಡಿರುವ ವಿವಿಧ ಗಡಿ ಪ್ರದೇಶಗಳಿಗೆ ತೆರಳಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ್ದಾರೆ. ಕಳೆದ ಬಾರಿಯ ದೀಪಾವಳಿಗೆ ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆಗೆ (ಎಲ್‍ಒಸಿ) ತೆರಳಿದ್ದರೆ, 2018ರಲ್ಲಿ ಉತ್ತರಾಖಂಡ ಹಾಗೂ 2017ರಲ್ಲಿ ಉತ್ತರ ಕಾಶ್ಮೀರದ ಗುರೇಜ್ ವಲಯಕ್ಕೆ ಭೇಟಿ ನೀಡಿದ್ದರು. ಅಲ್ಲದೇ 2015ರಲ್ಲಿ ಪಂಜಾಬ್ ಗಡಿ ಹಾಗೂ 2014ರಲ್ಲಿ ಸಿಯಾಚಿನ್‍ಗೆ ತೆರಳಿ ಯೋಧರಿಗೆ ಹಬ್ಬ ಆಚರಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ