ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಚುನಾವಣೋತ್ತರ ಸಮೀಕ್ಷೆಗಳನ್ನು ತಲೆಕೆಳಗಾಗಿಸಿ ಬಿಜೆಪಿ ನೇತೃತ್ವದ ಎನ್‍ಡಿಎ ಮುನ್ನಡೆ ಸಾಧಿಸಿದೆ. ಆದರೆ, ನೇತೃತ್ವ ವಹಿಸಿಕೊಂಡಿರುವ ಆರ್‍ಜೆಡಿ
ಫಲಿತಾಂಶದ ಟ್ರೆಂಡ್‍ನ್ನು ತಳ್ಳಿಹಾಕಿದ್ದು, ನಾವೇ ಮುಂದಿನ ಸರಕಾರ ರಚಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಷ್ಟ್ರೀಯ ಜನತಾ ದಳ, ಫಲಿತಾಂಶದ ಟ್ರೆಂಡ್‍ಗಳು ಏನೇ ಇರಲಿ, ಮುಂದಿನ ಬಾರಿ ಬಿಹಾರದಲ್ಲಿ ನಾವೇ ಸರಕಾರ ರಚಿಸುತ್ತೇವೆ. ಬಿಹಾರದಾದ್ಯಂತ ನಮ್ಮ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರ ಜೊತೆ ನಾವು ಸಂಪರ್ಕದಲ್ಲಿದ್ದೇವೆ. ನಮ್ಮ ಪರವಾಗಿ ಚುನಾವಣಾ ಫಲಿತಾಂಶ ಬರಲಿದೆ ಎಂದು ಹೇಳಿದ್ದಾರೆ ಎಂದು ಹೇಳಿದೆ.
ಇನ್ನು, ಕೋವಿಡ್ ಕಾರಣದಿಂದ ಮತ ಎಣಿಕೆ ತಡವಾಗಬಹುದೆಂದು ಹೇಳಿರುವ ಆರ್‍ಜೆಡಿ, ಬಿಹಾರದ ಜನತೆಗೆ ಬದಲಾವಣೆ ಬೇಕಿದೆ. ಖಚಿತವಾಗಿ ಮಹಾಘಟಬಂಧನ್ ಸರಕಾರ ರಚಿಸುತ್ತದೆ ಎಂದು ಹೇಳಿದೆ. ಇದುವರೆಗಿನ ಟ್ರೆಂಡ್ ಪ್ರಕಾರ ಬಿಜೆಪಿ ನೇತೃತ್ವದ ಎನ್‍ಡಿಎ ಮುನ್ನಡೆಯಲ್ಲಿದ್ದು, ಬಿಜೆಪಿ ಅತಿ ದೊಡ್ಡ ಪಕ್ಷವಾಗುವತ್ತ ದಾಪುಗಾಲು ಹಾಕಿದೆ.
ಮಹಾಘಟಬಂಧನ್‍ಗೆ ಕಾಂಗ್ರೆಸ್‍ನ ನಿರಾಸದಾಯಕ ಪ್ರದರ್ಶನವೇ ಮುಳುವಾಗುವ ಸಾಧ್ಯತೆ ಇದೆ. ಸ್ಪರ್ಧಿಸಿದ 70 ಕ್ಷೇತ್ರಗಳ ಪೈಕಿ ಕೇವಲ 18 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಆರ್‍ಜೆಡಿ 70 ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿದೆ. ಎಡಪಕ್ಷಗಳು 18ರಲ್ಲಿ ಗೆಲ್ಲುವ ವಿಶ್ವಾಸ ಹೊಂದಿವೆ.
ಇನ್ನು, ಬಿಜೆಪಿ 72 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದು, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಬಿಜೆಪಿಗೆ ಆರ್‍ಜೆಡಿ ಪ್ರಬಲ ಪೈಪೊಟಿ ನೀಡುತ್ತಿದೆ. ಮೂರನೇ ಸ್ಥಾನದಲ್ಲಿರುವ ಜೆಡಿಯು 47 ಕ್ಷೇತ್ರಗಳಲ್ಲಿ ಲೀಡ್ ಸಾಧಿಸಿದೆ. ಕಿಂಗ್ ಮೇಕರ್ ಕನಸು ಹೊತ್ತಿದ್ದ ಚಿರಾಗ್ ಪಾಸ್ವಾನ್ ಅವರ ಎಲ್‍ಜೆಪಿ ಕೇವಲ 01 ಕ್ಷೇತ್ರದಲ್ಲಿ ಮಾತ್ರ ತನ್ನ ಅಸ್ತಿತ್ವ ತೋರಿಸುತ್ತಿದೆ.