ಕೊಪ್ಪಳ: ಉಪ ಚುನಾವಣೆಯ ಫಲಿತಾಂಶದಿಂದಾಗಿ ಸರ್ಕಾರಕ್ಕೆ ಸರ್ಟಿಫಿಕೇಟ್ ಸಿಕ್ಕಿದೆ. ಮುಖ್ಯಮಂತ್ರಿ ಯಡಿಯೂರಪ್ಪ, ಹಾಗೂ ಪ್ರಧಾನಿ ಮೋದಿ ಅವರ ಆಡಳಿತ ಜನರ ಮನ ಗೆದ್ದಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಅವರು ಮಂಗಳವಾರ ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಿರಾ, ಆರ್‍ಆರ್ ನಗರ, ಮಧ್ಯಪ್ರದೇಶ, ಬಿಹಾರ್‍ದಲ್ಲಿ ಬಿಜೆಪಿ ಪರವಾಗಿ ಜನ ಮತ ನೀಡಿದ್ದಾರೆ. ಕಾಂಗ್ರೆಸ್ ಅವನತಿಯತ್ತ ಸಾಗುತ್ತಿದೆ ಎಂಬುವುದಕ್ಕೆ ಈ ಚುನಾವಣೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಕಾಂಗ್ರೆಸ್‍ನವರು ಬಂಡೆ, ಟಗರು ಎಂದು ಹೇಳಿತ್ತಿದ್ದವರು. ಈಗ ಅದೇ ಬಂಡೆ, ಟಗರು ಎಲ್ಲಿ ಹೋದವು ಎಂದು ಪ್ರಶ್ನಿಸಿದ ಅವರು, ಇವೆಲ್ಲ ಆಟ ಜನರ ಮುಂದೆ ನಡೆಯೊಲ್ಲ. ಈಗ ಬಿಜೆಪಿಯತ್ತ ಜನರ ಒಲವು ಹೆಚ್ಚಾಗಿದೆ. ಎರಡು ಉಪಚುನಾವಣೆ ಫಲಿತಾಂಶ ಸರ್ಕಾರಕ್ಕೆ ಒಂದು ಸರ್ಟಿಫಿಕೇಟ್ ನೀಡಿದೆ. ಆದರೆ, ಕೆಲವರ ಹಿಡಿತದಲ್ಲಿರುವ ಕಾಂಗ್ರೆಸ್ ಈಗ ಅವನತಿಯತ್ತ ಸಾಗಿದೆ ಎಂಬುದು ಮುನ್ಸೂಚನೆ ನೀಡಿದಂತಾಗಿದೆ ಎಂದರು.
ಶಿರಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲು ಕಾಂಗ್ರೆಸ್ ಮತ್ತು ಯತೀಂದ್ರ ಸಿದ್ದರಾಮಯ್ಯ ಕೈ ಜೋಡಿಸಿರೋ ಆರೋಪ ಹಿನ್ನೆಲೆ ಕುರಿತು ಮಾತನಾಡಿದ ಅವರು, ಇದು ಒಪ್ಪಲು ಸಾಧ್ಯವಿಲ್ಲ. ಶಿರಾ ಚುನಾವಣೆ ಸಿದ್ದರಾಮಯ್ಯ ನೇತೃತ್ವದಲ್ಲೇ ನಡೆದಿದೆ. ಸಿದ್ದರಾಮಯ್ಯ ಇಂಥ ಚೀಫ್ ರಾಜಕಾರಣ ಮಾಡೋದಿಲ್ಲ. ಇವೆಲ್ಲ ಸುಳ್ಳು ಅನ್ನಿಸುತ್ತೆ ಎಂದರು.
ಭತ್ತ ಖರೀದಿ ಕೇಂದ್ರ ಆರಂಭವಾಗಲಿದೆ. ಈ ಭಾಗದಲ್ಲಿ ಯಾರೂ ಭತ್ತ ನೀಡಲ್ಲ. ಡಿ.1 ರಿಂದ ಭತ್ತ ಖರೀದಿ ಆಗಲಿದೆ. ನೆರೆಯಿಂದ ಹಾನಿಯಾದ ಪ್ರದೇಶ ಸಮೀಕ್ಷೆ ವರದಿ ಆದರಿಸಿ ಪರಿಹಾರ ನೀಡಲಾಗುವುದು ಎಂದರು.
ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ವಿನಯ ಕುಲಕರ್ಣಿ ಬಂಧನ ವಿಚಾರವಾಗಿ ಸ್ವಾಮೀಜಿಗಳು ಮದ್ಯಪ್ರವೇಶ ಕುರಿತು ಮಾತನಾಡಿದ ಅವರು, ಕೊಲೆ ಪ್ರಕರಣದಲ್ಲಿ ಯಾರ ಹಸ್ತಕ್ಷೇಪ ಸಲ್ಲದು. ಇಲ್ಲಿ ಜಾತಿ ಮುಖ್ಯವಲ್ಲ. ತನಿಖೆ ಆಧರಿಸಿ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಗಂಗಾವತಿ ಕೃಷಿ ಕಾಲೇಜು ಆರಂಭಿಸಲಾಗುವುದು. ವಿವಿಯಿಂದ ವರದಿ ಪಡೆದಿದ್ದೇವೆ. ಆರ್ಥಿಕ ಇಲಾಖೆಯಿಂದ ಅನುಮತಿ ಪಡೆದು ಆರಂಭಿಸಲಾಗುವುದು ಎಂದರು.