ತೆಲಂಗಾಣದಲ್ಲಿ ಅಮೇಜಾನ್ 20,761 ಕೋಟಿ ರೂ. ಹೂಡಿಕೆ

Las Vegas - Circa June 2019: Amazon.com Fulfillment Center. Amazon is the Largest Internet-Based Retailer in the United States

ಹೈದರಾಬಾದ್: ವಿಶ್ವದ ಅತಿ ದೊಡ್ಡ ಕ್ಲೌಡ್ ಕಂಪ್ಯೂಟಿಂಗ್ ಸಂಸ್ಥೆಗಳಲ್ಲಿ ಒಂದಾಗಿರುವ ಅಮೇಜಾನ್ ವೆಬ್ ಸರ್ವೀಸಸ್ ಸಂಸ್ಥೆ (ಎಡಬ್ಲೂಎಸ್), ರಾಜ್ಯದಲ್ಲಿ ಡೇಟಾ ಕೇಂದ್ರಗಳನ್ನು ಸ್ಥಾಪಿಸಲು ಬರೋಬ್ಬರಿ 20,761 ಕೋಟಿ ರೂ. ಹೂಡಲು ಮುಂದಾಗಿದೆ ಎಂದು ತೆಲಂಗಾಣ ಸರ್ಕಾರ ಶುಕ್ರವಾರ ಘೋಷಿಸಿದೆ.
ತೆಲಂಗಾಣದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಹುದೊಡ್ಡ ಮೊತ್ತದ ವಿದೇಶಿ ನೇರ ಹೂಡಿಕೆ (ಎಫ್‍ಡಿಐ) ದೊರೆಯುತ್ತಿದೆ. ಎಡಬ್ಲೂಎಸ್ ಹಲವಾರು ಹಂತದ ಮಾತುಕತೆ ನಡೆಸಿದ ನಂತರ, ರಾಜ್ಯದಲ್ಲಿ ಹಲವಾರು ಡೇಟಾ ಕೇಂದ್ರ ನಿರ್ಮಿಸಲು 20,761 ಕೋಟಿ ರೂ. ಹೂಡಲು ತೀರ್ಮಾನಿಸಿದೆ. 2022ರ ಮಧ್ಯಭಾಗದಲ್ಲಿ ಡೇಟಾ ಕೇಂದ್ರ ನಿರ್ಮಾಣ ಆರಂಭವಾಗುವ ನಿರೀಕ್ಷೆಯಿದೆ ಎಂದು ರಾಜ್ಯದ ಮಾಹಿತಿ ತಂತ್ರಜ್ಞಾನ ಮತ್ತು ಕೈಗಾರಿಕಾ ಸಚಿವ ಹಾಗೂ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಪುತ್ರ ಕೆ.ಟಿ.ರಾಮ ರಾವ್ (ಕೆಟಿಆರ್) ಟ್ವೀಟ್ ಮಾಡಿದ್ದಾರೆ.
ಹೈದರಾಬಾದ್‍ನ ಒಟ್ಟು ಮೂರು ಪ್ರದೇಶದಲ್ಲಿ ಡೇಟಾ ಕೇಂದ್ರ ನಿರ್ಮಿಸಲು ತೀರ್ಮಾನಿಸಲಾಗಿದೆ. ಅಲ್ಲದೇ ಅಮೇಜಾನ್‍ನಿಂದ ಪ್ರೇರಣೆ ಪಡೆದು, ಇನ್ನಷ್ಟು ವಿದೇಶಿ ಸಂಸ್ಥೆಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಮುಂದಾಗುವ ನಿರೀಕ್ಷೆಯಿದ್ದು, ರಾಜ್ಯದ ಐಟಿ ಕ್ಷೇತ್ರಕ್ಕೆ ಹಾಗೂ ಡಿಜಿಟಲ್ ಆರ್ಥಿಕತೆಗೆ ಬಹುದೊಡ್ಡ ಉತ್ತೇಜನ ಸಿಗಲಿದೆ. 2014ರಿಂದ ಇದುವರೆಗೂ ರಾಜ್ಯಕ್ಕೆ ದೊರೆತಿರುವ ಎಫ್‍ಡಿಐ ಪೈಕಿ ಇದೇ ಬಹುದೊಡ್ಡ ಹೂಡಿಕೆ ಎಂಬುದು ಸಂತಸದ ಸಂಗತಿಯಾಗಿದೆ ಎಂದು ಕೆಟಿಆರ್ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ