
ಭಾರತದ ಸಾಂಪ್ರದಾಯಿಕ ಕ್ರೀಡೆಯಾದ `ಅಟ್ಯಾಪಟ್ಯಾ’ದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಜ್ಜೆ ಗುರುತುಗಳನ್ನು ಮೂಡಿಸಿರುವ ಅಪ್ಪಟ ಗ್ರಾಮೀಣ ಪ್ರತಿಭೆ ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕಿನ ಹುರಳಿಕುಪ್ಪೆಯ ಮಹೇಶ ಏರಿಮನಿ ಅವರಿಗೆ 2017ನೇ ಸಾಲಿನ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಸಂದಿದೆ. ಮಹೇಶ ಏರಿಮನಿ 2015ರಲ್ಲಿ ಕೇರಳದಲ್ಲಿ ನಡೆದ 28ನೇ ಕಿರಿಯರ ಅಟ್ಯಾಪಟ್ಯಾ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಹಾಗೂ 2017ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ 2ನೇ ಅಟ್ಯಾಪಟ್ಯಾ ಫೆಡರೇಷನ್ ಕಪ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. 2017 ಜನವರಿಯಲ್ಲಿ ಭೂತಾನ್‍ನಲ್ಲಿ ನಡೆದ 3ನೇ ಸೌತ್ ಏಷ್ಯನ್ ಅಟ್ಯಾಪಟ್ಯಾ ಪಂದ್ಯಾವಳಿಯಲ್ಲಿ ಚಿನ್ನದ ಪದಕವನ್ನು ಮಹೇಶ ಏರಿಮನಿ ಮುಡಿಗೇರಿಸಿ ಕೊಂಡಿದ್ದಾರೆ.