Varta Mitra News

ಮುಂಗಾರು ಹಂಗಾಮಿನಲ್ಲಿ ಕೃಷಿಕರಿಗೆ ಸೂಕ್ತ ಸಲಹೆ, ಸೂಚನೆಗಳನ್ನು ನೀಡುವ “ಮಾನ್ಸೂನ್ ಮಿಷನ್ ಮತ್ತು ಉನ್ನತ-ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ಸೌಲಭ್ಯಗಳಲ್ಲಿ ಹೂಡಿಕೆಯ ಆರ್ಥಿಕ ಲಾಭಗಳನ್ನು ಅಂದಾಜು ಮಾಡುವ” ಎನ್‍ಸಿಎಇಆರ್ ವರದಿಯನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಹರ್ಷವರ್ಧನ್ ನವದೆಹಲಿಯ ಪೃಥ್ವಿ ಭವನದಲ್ಲಿ ನಿನ್ನೆ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ಮೊಬೈಲ್ ಆ್ಯಪ್, ಮೇಘದೂತ್ ಮತ್ತು ಸಾಮಾಜಿಕ ಮಾಧ್ಯಮ ಸೇರಿದಂತೆ ವಿವಿಧ ಸಂವಹನ ಮಾರ್ಗಗಳ ಮೂಲಕ ಕೃಷಿ ಹವಾಮಾನ ಮುನ್ಸೂಚನೆಗಳು ಮತ್ತು ಎಚ್ಚರಿಕೆಗಳನ್ನು ಸುಮಾರು 4 ಕೋಟಿ 3ಲಕ್ಷ ರೈತರಿಗೆ ತಲುಪಿಸಲಾಗುತ್ತಿದೆ ಎಂದು ತಿಳಿಸಿದರು. ಈ ಸೌಲಭ್ಯಗಳಿಂದ ದೇಶದ ಬಡತನ ರೇಖೆಗಿಂತ ಕೆಳಗಿರುವ ಸುಮಾರು ಒಂದು ಕೋಟಿ ಏಳು ಲಕ್ಷ ಕೃಷಿಕ ಕುಟುಂಬಗಳು ಮತ್ತು 53 ಲಕ್ಷ ಬಿಪಿಎಲ್ ಮೀನುಗಾರ ಕುಟುಂಬಗಳಿಗೆ 50 ಸಾವಿರ ಕೋಟಿ ರೂಪಾಯಿ ಮೌಲ್ಯದ ಪ್ರಯೋಜನಗಳನ್ನು ನೀಡುತ್ತಿದೆ ಎಂದು ವರದಿ ತಿಳಿಸಿದೆ ಎಂದರು. ಭೂ ವಿಜ್ಞಾನ ಸಚಿವಾಲಯದ ರಾಷ್ಟ್ರೀಯ ಮಾನ್ಸೂನ್ ಮಿಷನ್ ಮತ್ತು ಉನ್ನತ ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ಕಾರ್ಯಕ್ರಮಗಳಿಗಾಗಿ ಸರ್ಕಾರ ಖರ್ಚು ಮಾಡುವ ಪ್ರತಿ ರೂಪಾಯಿಯನ್ನು ವರದಿಯಲ್ಲಿ ಹೇಳಲಾಗಿದೆ. ಇದರಿಂದಾಗಿ ದೇಶವು ಆರ್ಥಿಕ ಐವತ್ತು ಸಾವಿರ ಕೋಟಿ ರೂಪಾಯಿ ಮೌಲ್ಯದ ಲಾಭಗಳನ್ನು ಪಡೆಯುತ್ತಿದೆ. ಇದು ಮುಂದಿನ ಐದು ವರ್ಷಗಳ ಅವಧಿಯಲ್ಲಿ ಹೂಡಿಕೆಯ ಮೇಲೆ 50 ಪಟ್ಟು ಹೆಚ್ಚು ಲಾಭ ದೊರಕಿಸಿಕೊಡಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು. ರೈತರಿಗೆ ದಿನನಿತ್ಯದ ಕಾರ್ಯಾಚರಣೆಗಳಿಗಾಗಿ ಕೃಷಿ-ಹವಾಮಾನ ಸೇವೆಗಳನ್ನು ಒದಗಿಸುವುದು ಭಾರತೀಯ ಹವಾಮಾನ ಇಲಾಖೆಯ ಪ್ರಮುಖ ಸೇವೆಗಳಲ್ಲೊಂದಾಗಿದೆ. ಭಾರತೀಯ ಹವಾಮಾನ ಇಲಾಖೆಯು ಭಾರತೀಯ ಕೃಷಿ ಸಂಶೋಧನಾ ಮಂಡಳಿ-ಐಸಿಎಆರ್ ಸಹಯೋಗದೊಂದಿಗೆ ವಾರಕ್ಕೆ ಎರಡು ಬಾರಿ ಕೃಷಿ-ಹವಾಮಾನ ಸಲಹೆಗಳನ್ನು ಎಲ್ಲಾ ಜಿಲ್ಲೆಗಳ ರೈತರಿಗಾಗಿ ಸುಮಾರು 400 ಜಿಲ್ಲಾ ಕೃಷಿ-ಹವಾಮಾನ ಘಟಕಗಳ ಮೂಲಕ ಒದಗಿಸುತ್ತದೆ ಎಂದು ಡಾ. ಹರ್ಷವರ್ಧನ್ ತಿಳಿಸಿದರು. ಭಾರತೀಯ ಹವಾಮಾನ ಇಲಾಖೆಯು ಬ್ಲಾಕ್ ಮಟ್ಟದ ಹವಾಮಾನ ಮುನ್ಸೂಚನೆ ಮತ್ತು ರೈತರಿಗೆ ಎಚ್ಚರಿಕೆಗಳನ್ನು ನೀಡುಲು ಪ್ರಾರಂಭಿಸಿದೆ. ಪ್ರಸ್ತುತ 2000 ಬ್ಲಾಕ್‍ಗಳಲ್ಲಿ ರೈತರು ಸಲಹೆ ಪಡೆಯುತ್ತಿದ್ದಾರೆ ಎಂದು ಹೇಳಿದರು.
ವಿಶ್ವ ಸಂಸ್ಥೆಯ ಮಹಿಳಾ ಸಬಲೀಕರಣ ಘಟಕ ಮೈಗೌ ಸಹಯೋಗದೊಂದಿಗೆ ಆಯೋಜಿಸಿದ್ದ ಕೋವಿಡ್-19 ಸ್ತ್ರೀ ಶಕ್ತಿ ಸ್ಪರ್ಧೆಯಲ್ಲಿ ಮಹಿಳೆಯರ ನೇತೃತ್ವದ ಆರು ನವೋದ್ಯಮಗಳಿಗೆ ಪ್ರಶಸ್ತಿ ಲಭಿಸಿದೆ. ವಿನೂತನ ಪರಿಹಾರಗಳನ್ನು ನೀಡಿದ ಕರ್ನಾಟಕದ ಮೂವರು ಮಹಿಳೆಯರು ಸಹ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೈಗೌ ಆಯೋಜಿಸಿದ್ದ ಆವಿಷ್ಕಾರಿ ವೇದಿಕೆಯಲ್ಲಿ ಮಹಿಳೆಯರ ನೇತೃತ್ವದ ನವೋದ್ಯಮಗಳು ಹಾಗೂ ಅವುಗಳು ಕಂಡು ಹಿಡಿದಿರುವ ಪರಿಹಾರಗಳು ಮತ್ತು ಬಹು ದೊಡ್ಡ ಪ್ರಮಾಣದ ಮಹಿಳೆಯರ ಮೇಲೆ ಪರಿಣಾಮ ಬೀರುವಂತಹ ನವೀನಪರಿಹಾರಗಳನ್ನು ಕಂಡುಹಿಡಿದಿರುವ ಉದ್ಯಮಗಳನ್ನು ಪೊತ್ಸಾಹಿಸುವ ಉದ್ದೇಶ ಹೊಂದಲಾಗಿತ್ತು. ಒಟ್ಟು 1 ಸಾವಿರದ 265 ಮಂದಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಬೆಂಗಳೂರಿನ ರೆಸೆಡಾ ಲೈಫ್ ಸೈನ್ಸ್ ಪ್ರವೈಟ್ ಲಿಮಿಟೆಡ್ ಕಂಪನಿಯ ಸಂಸ್ಥಾಪಕರಾದ ಡಾ. ಪಿ. ಗಾಯತ್ರಿ ಹೆಲಾ ಅವರು, ಸಿಂಥೆಟಿಕ್ ರಾಸಾಯನಿಕಗಳ ಬದಲಾಗಿ ಗಿಡಗಳ ಸಾರವನ್ನು ಬಳಸಿ, ಕೃಷಿ ಆಧಾರಿತ ಗೃಹ ಉತ್ಪನ್ನಗಳ ವಿನ್ಯಾಸ ಮತ್ತು ಅಭಿವೃದ್ಧಿಗೊಳಿಸುವ ಪರಿಕಲ್ಪನೆಯನ್ನು ನೀಡಿದ್ದರು. ಕೋವಿಡ್-19 ಸೋಂಕಿನ ಜೊತೆಗೆ ಇತರೆ ಸೋಂಕುಗಳಿಗೂ ಬಳಸಬಹುದಾದ ಮದ್ಯ ಸಾರವಿಲ್ಲದ ಹ್ಯಾಂಡ್ ಸ್ಯಾನಿಟೈಸರ್ ಉತ್ಪಾದಿಸುವ ವಿನೂತನ ಚಿಂತನೆಯನ್ನು ಅವರು ಮಂಡಿಸಿದ್ದರು. ಬೆಂಗಳೂರಿನ ಸೆರಾಗೇನ್ ಬಯೋ ಥೆರಪೆಟಿಕ್ಸ್ ಪ್ರೈವೇಟ್ ಲಿಮಿಟೆಡ್ ನ ಸಿಇಒ ಮತ್ತು ಸಹ ಸಂಸ್ಥಾಪಕರಾದ ವಾಸಂತಿ ಪಳನಿವೇಲ್ ಅವರು ಕೋವಿಡ್-19ನಿಂದಾಗಿ ಉಂಟಾಗುವ ಉಸಿರಾಟ ತೊಂದರೆಗಳ ಚಿಕಿತ್ಸೆಗೆ ಪ್ಲಾಸ್ಮಾ ಪರಿಹಾರವನ್ನು ಅಭಿವೃದ್ಧಿಪಡಿಸಿದ್ದಾರೆ. ಬೆಂಗಳೂರು ಮೂಲದ ಎಂಪಥಿ ಡಿಸೈನ್ ಲ್ಯಾಬ್‍ನ ಸಹ ಸಂಸ್ಥಾಪಕರಾದ ಶಿವಿ ಕಪಿಲ್ ಅವರು ಗರ್ಭಿಣಿಯರಿಗೆ ಆರೋಗ್ಯದ ಸೂಕ್ತ ಸಲಹೆ, ಸೂಚನೆಗಳನ್ನು ನೀಡುವ ಐಒಟಿ ಆಧಾರಿತ ಸಾಧನವನ್ನು ಅನ್ವೇಷಣೆ ಮಾಡಿದ್ದರು. ಇದು ಮಗುವಿನ ನಿರೀಕ್ಷೆಯಲ್ಲಿರುವವರಿಗೆ ಸಕಾಲದಲ್ಲಿ ಸೂಕ್ತ ಸಲಹೆ , ಮುನ್ನೆಚ್ಚರಿಕೆಗಳನ್ನು ನೀಡಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ