ಬಿಹಾರ ಚುನಾವಣೆ | ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ಭಾರತ್ ಮಾತಾ ಕೀ ಜೈ ಎನ್ನಲು ಬಿಡದವರಿಗೆ ಬೆಂಬಲ ನೀಡದಿರಿ

ಬಿಹಾರ: ಬಿಹಾರ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನದ ಬೆನ್ನಲ್ಲೇ ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದು, ಭಾರತ್ ಮಾತಾ ಕೀ ಜೈ ಎನ್ನಲು ಬಿಡದವರಿಗೆ ಬೆಂಬಲ ನೀಡದಿರಿ ಜನರಿಗೆ ಕರೆ ನೀಡಿದ್ದಾರೆ.
ರಾಜ್ಯದಲ್ಲಿ ಲಾಲೂ ಪ್ರಸಾದ್ ಯಾದವ್ ಹಾಗೂ ರಾಬ್ರಿ ದೇವಿ ಆಡಳಿತವನ್ನು ಜಂಗಲ್ ರಾಜ್ ಎಂದು ಕರೆದ ಮೋದಿ, ಇವರು ಮೊದಲು ಬಿಹಾರದ ಜನರಿಗೆ ಭಾರತ್ ಮಾತಾ ಕೀ ಜೈ, ಜೈ ಶ್ರೀರಾಮ್ ಎನ್ನಲು ಬಿಟ್ಟಿರಲಿಲ್ಲ. ಮುಂದೆಯೂ ಇವರು ಇದೇ ರೀತಿ ವರ್ತಿಸುತ್ತಾರೆ. ಹಾಗಾಗಿ ಅಭಿವೃದ್ಧಿ ಮಂತ್ರ ಪಠಿಸುವ ಎನ್‍ಡಿಎಗೆ ಬೆಂಬಲ ನೀಡಿ ಎಂದಿದ್ದಾರೆ.
ನಾವು ಭಾರತ್ ಮಾತಾ ಕೀ ಜೈ ಎನ್ನುವುದಿಲ್ಲ ಎಂದು ಒಂದು ತಂಡ ಹೇಳುತ್ತದೆ. ಇದರಿಂದ ತಲೆನೋವು ಬರುತ್ತದೆ ಎಂದು ಮತ್ತೊಂದು ಗುಂಪು ಆಣಿಮುತ್ತು ಉದುರಿಸುತ್ತದೆ. ಇಂತಹ ಮನಸ್ಥಿತಿಯವರೆಲ್ಲರೂ ಒಗ್ಗೂಡಿ ಬಿಹಾರ ಚುನಾವಣೆಯಲ್ಲಿ ಮತ ಕೇಳಲು ಜನರ ಬಳಿ ಬರುತ್ತಿದ್ದಾರೆ. ಇವರು ಮುಂದೆಯೂ ನಿಮಗೆ ಭಾರತ್ ಮಾತಾ ಕೀ ಜೈ ಎನ್ನಲು ಬಿಡುವುದಿಲ್ಲ. ಹಾಗಾಗಿ ಇಂತಹ ಕುತ್ಸಿತ ಮನಸ್ಥಿತಿಯವರಿಗೆ ಜನ ಸರಿಯಾದ ಪಾಠ ಕಲಿಸಬೇಕು ಎಂದು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಹಾರ ಚುನಾವಣೆ ಎರಡನೇ ಹಂತದ ಮತದಾನ ಮಂಗಳವಾರ ಮುಕ್ತಾಯವಾಗಿದ್ದು, ನವೆಂಬರ್ 7ರಂದು ಮೂರನೇ ಹಾಗೂ ಅಂತಿಮ ಹಂತದ ಮತದಾನ ನಡೆಯಲಿದೆ. ನ.10ರಂದು ಫಲಿತಾಂಶ ಪ್ರಕಟವಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ