ಉಪ ಸಮರ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಇನ್ನೇನಿದ್ದರೂ ಮನೆ-ಮನ ಪ್ರಚಾರ

ಬೆಂಗಳೂರು: ನವೆಂಬರ್ 3 ರಂದು ಮತದಾನ ನಡೆಯಲಿರುವ ಶಿರಾ, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಹಿರಂಗ ಪ್ರಚಾರಕ್ಕೆ ಶನಿವಾರ ತೆರೆ ಬೀಳಲಿದ್ದು, ಕೊನೆಯ ಎರಡು ದಿನಗಳು ರಾಜಕೀಯ ಧುರೀಣರು, ತಾರಾ ಪ್ರಚಾರಕರು ಭರ್ಜರಿ ಪ್ರಚಾರ ನಡೆಸಿದರು.
ಕಡೆಯ ದಿನವಾದ ಶನಿವಾರದಂದು ಎರಡೂ ಕ್ಷೇತ್ರಗಳಲ್ಲಿ ಅಂತಿಮ ಹಂತದ ಅಬ್ಬರದ ಪ್ರಚಾರ ನಡೆಯಲಿದ್ದು, ನಂತರ ಅಭ್ಯರ್ಥಿಗಳು ಮತದಾರರ ಮನೆ-ಮನೆಗೆ ತೆರಳಿ ಮತಯಾಚನೆ ಮಾಡಲಿದ್ದಾರೆ.
ಶುಕ್ರವಾರ ಶಿರಾದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿ ಹುರಿಯಾಳು ರಾಜೇಶ್‍ಗೌಡ ಪರ ಪ್ರಚಾರ ಕೈಗೊಂಡರೆ, ಇತ್ತ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಪರವಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರಚಾರ ನಡೆಸಿದರು. ಕ್ಷೇತ್ರದಲ್ಲಿ ಕೈ ನಾಯಕರ ಅಬ್ಬರ ಕಡಿಮೆಯಾಗಿತ್ತು. ಕ್ಷೇತ್ರಕ್ಕೆ ಸಿಎಂ ಬರುತ್ತಿದ್ದಂತೆ ಕಾಂಗ್ರೆಸ್ ನಾಯಕರು ರಾಜರಾಜೇಶ್ವರಿ ನಗರದತ್ತ ಹೊರಳಿದ್ದರು.
ಆರ್.ಆರ್. ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರವಾಗಿ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಮತ ಪ್ರಚಾರ ನಡೆಸಿದರು. ಇದೇ ವೇಳೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ನಟ ದರ್ಶನ್, ನಟಿ ಅಮೂಲ್ಯ, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಸೇರಿದಂತೆ ತಾರಾ ಪ್ರಚಾರಕರು ಇಡೀ ದಿನ ಮತಯಾಚನೆ ಮಾಡಿದರು. ಇದರ ಬೆನ್ನಲ್ಲೇ ಪ್ರಚಾರಕಾರ್ಯದ ಕೊನೆಯ ದಿನವಾದ ಶನಿವಾರದಂದು ಸಿಎಂ ಯಡಿಯೂರಪ್ಪ ಅವರು ಆರ್.ಆರ್. ನಗರದಲ್ಲಿ ಪಕ್ಷದ ಅಭ್ಯರ್ಥಿ ಮುನಿರತ್ನ ಪರ ಪ್ರಚಾರ ನಡೆಸಲಿದ್ದಾರೆ.
ಕೈ-ದಳದಾಟಕ್ಕೆ ಚರಮಗೀತೆ
ಶಿರಾ ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಆಟಕ್ಕೆ ಮತದಾರರು ಚರಮಗೀತೆ ಹಾಡಲಿದ್ದು, ಈ ಪಕ್ಷಗಳ ಭದ್ರಕೋಟೆ ನುಚ್ಚುನೂರು ಆಗುವುದು ಖಚಿತ. ಎರಡೂ ಉಪಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಸುವುದು ನಿಶ್ಚಿತ. ಬಿಜೆಪಿ ಗೆಲ್ಲುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಅಷ್ಟೇ ಅಲ್ಲದೆ, ಮುಂದಿನ ಎರಡೂವರೆ ವರ್ಷದಲ್ಲಿ ರಾಜ್ಯವನ್ನು ಅಭಿವೃದ್ಧಿಯಲ್ಲಿ ಮಾದರಿ ರಾಜ್ಯವನ್ನಾಗಿಸುವ ಸಂಕಲ್ಪ ಹೊಂದಿದ್ದೇವೆ. ಹಾಗೆಯೇ ಶಿರಾ ತಾಲೂಕನ್ನು ಶಿಕಾರಿಪುರದಂತೆ ಮಾದರಿ ತಾಲೂಕು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಪ್ರತಿಯೊಬ್ಬರು ಸ್ವಾಭಿಮಾನದಿಂದ ಬದುಕುವಂತೆ ಮಾಡುವ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಹೊಣೆಗಾರಿಕೆಯನ್ನು ಮತದಾರರು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ