ಶಿರಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಚಾರ | ಜಯದ ವಿಶ್ವಾಸ ಬಿಜೆಪಿ ಗೆಲುವು ನಿಶ್ಚಿತ

ತುಮಕೂರು: ಶಿರಾ ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಆಟಕ್ಕೆ ಮತದಾರರು ಚರಮಗೀತೆ ಹಾಡಲಿದ್ದು, ಈ ಪಕ್ಷಗಳ ಭದ್ರಕೋಟೆ ನುಚ್ಚುನೂರು ಆಗುವುದು ಖಚಿತ. ಎರಡೂ ಉಪಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಸು ವುದು ನಿಶ್ಚಿತ. ಬಿಜೆಪಿ ಗೆಲ್ಲುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಉಪಚುನಾವಣೆಯ ಹಿನ್ನೆಲೆಯಲ್ಲಿ ಶಿರಾ ತಾಲೂಕಿನ ಮದಲೂರಿನಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮದಲೂರು ಕೆರೆಗೆ ಕಾಲುವೆಯ ನಿರ್ಮಾಣಕ್ಕೆ ಅನುದಾನ ನೀಡಿದ್ದೇ ನಾವು. ಇನ್ನು 6 ತಿಂಗಳೊಳಗೆ ಕೆರೆ ತುಂಬಿಸಿ, ನಾನೇ ಉದ್ಘಾಟಿಸುತ್ತೇನೆ. ಇದುವರೆಗೂ ಯಡಿಯೂರಪ್ಪ ನೀಡಿದ್ದ ಭರವಸೆಗಳು ಯಾವುದೂ ಹುಸಿಯಾಗಿಲ್ಲ ಎಂದರು.
ಶಿರಾದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ವಿಶ್ವಾಸವಿದೆ. ಹೇಮಾವತಿಯಿಂದ ಮದಲೂರು ಕೆರೆಗೆ ನೀರು, ಬಗರ್ ಹುಕುಂ ಸಾಗುವಳಿ ಚೀಟಿ ವಿತರಣೆ, ಕುಂಚಿಟಿಗ ಸಮಾಜವನ್ನು 2ಎಗೆ ಸೇರಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಭದ್ರ ಮೇಲ್ದಂಡೆ ಯೋಜನೆಯಿಂದ ಶಿರಾ ತಾಲೂಕಿನ 60 ಕೆರೆಗಳನ್ನು ತುಂಬಿಸುವ ಕಾರ್ಯ ಮಾಡುತ್ತೇವೆ ಎಂದ ಅವರು,
ಕಿಸಾನ್ ಸನ್ಮಾನ್ ಯೋಜನೆ ಅನ್ವಯ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ರೈತರಿಗೆ ವಾರ್ಷಿಕ ಒಟ್ಟು 10 ಸಾವಿರ ರೂ. ಸಹಾಯಧನ ನೀಡಲಾಗುತ್ತಿದೆ ಎಂದರು.
ಮದ್ದನಕ್ಕಹಳ್ಳಿಯಲ್ಲಿ ಭೋವಿ ಸಮುದಾಯದ ಕಲ್ಲು ಗಣಿ ಸಮಸ್ಯೆ ಬಗೆಹರಿಸುವಂತೆ ಸಮಾವೇಶದಲ್ಲಿ ಕೇಳಿ ಬಂದ ಮನವಿಗಳಿಗೆ
ತಕ್ಷಣ ಸ್ಪಂದಿಸಿದ ಯಡಿಯೂರಪ್ಪನವರು, ಗಮನಹರಿಸುವುದಾಗಿ ಹೇಳಿದರು. ಮುಂದಿನ ಎರಡೂವರೆ ವರ್ಷದಲ್ಲಿ ರಾಜ್ಯವನ್ನು ಅಭಿವೃದ್ಧಿಯಲ್ಲಿ ಮಾದರಿ ರಾಜ್ಯವನ್ನಾಗಿಸುವ ಸಂಕಲ್ಪ ಹೊಂದಿದ್ದೇವೆ. ಹಾಗೆಯೇ ಶಿರಾ ತಾಲೂಕನ್ನು ಶಿಕಾರಿಪುರದಂತೆ ಮಾದರಿ ತಾಲೂಕು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಪ್ರತಿಯೊಬ್ಬರು ಸ್ವಾಭಿಮಾನದಿಂದ ಬದುಕುವಂತೆ ಮಾಡುವ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಹೊಣೆಗಾರಿಕೆಯನ್ನು ಮತದಾರರು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕೇಂದ್ರ ಸಚಿವ ಸದಾನಂದಗೌಡ, ಸಚಿವ ಶ್ರೀರಾಮುಲು, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ