ಸಿಎಂ ಸ್ಥಾನಕ್ಕೆ ಕಾಂಗ್ರೆಸ್‍ನಲ್ಲಿ ಈಗಲೇ ಪೈ ಪೊಟಿ: ಕಟೀಲು ಟೀಕೆ ನಿಶ್ಚಿತಾರ್ಥ ಮುನ್ನವೇ ನಾಮಕರಣಕ್ಕೆ ಯತ್ನ

ಚಿಕ್ಕಮಗಳೂರು: ಕನ್ಯೆ ಹುಡುಕಿ ನಿಶ್ಚಿತಾರ್ಥ ಆಗುವ ಮುನ್ನವೇ ಮಗುವಿಗೆ ನಾಮಕರಣ ಮಾಡುವ ಪ್ರಯತ್ನ ಕಾಂಗ್ರೆಸ್‍ನಲ್ಲಿ ನಡೆದಿದೆ. ಚುನಾವಣೆಗೆ ಮೂರೂವರೆ ವರ್ಷವಿರುವಾಗಲೇ ಅಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಮ್ಯೂಸಿಕಲ್ ಚೇರ್ ಆರಂಭವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಟೀಕಿಸಿದರು.
ಕಾಂಗ್ರೆಸ್‍ನಲ್ಲಿ ಹಲವರು ಬೇಲ್‍ನಲ್ಲಿದ್ದಾರೆ. ಅದು ಮುಗಿದ ನಂತರ ಏನಾಗುತ್ತದೆ ಎನ್ನುವುದು ಗೊತ್ತಿಲ್ಲ. ಹೀಗಾಗಿ ಜನ ಕಾಂಗ್ರೆಸ್‍ನ ಈ ಎಲ್ಲ ನಡವಳಿಕೆಗಳಿಂದ ಬೇಸತ್ತು ಈಗ ನಡೆಯುತ್ತಿರುವ ಉಪ ಚುನಾವಣೆಯಲ್ಲೂ ಬಿಜೆಪಿಯ ಪರ ಒಲವು ವ್ಯಕ್ತಪಡಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬರ, ನೆರೆ ಪರಿಸ್ಥಿತಿ ಹಾಗೂ ಕೋವಿಡ್ ಸಂಕಷ್ಟದ ಸ್ಥಿತಿಯಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ತಂಡವಾಗಿ ಕೆಲಸ ಮಾಡಿದ್ದನ್ನು ಜನ ಮೆಚ್ಚಿದ್ದಾರೆ ಎಂದರು.
ಸಿದ್ದರಾಮಯ್ಯರಿಗೆ ಧಂ ಇರಲಿಲ್ಲವೇ?
ಕರ್ನಾಟಕದ ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ ಎನ್ನುವ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಜತೆ ನಾವಿದ್ದೇವೆ ಎಂದು ಹೇಳಿದ್ದಾರೆ. ನೆರೆ ಸಂತ್ರಸ್ತರಿಗೆ ಯಾರು ಎಷ್ಟು ಸ್ಪಂದಿಸಿದರು ಎನ್ನುವುದು ಸಿಎಂ ಆಗಿದ್ದ ಸಿದ್ದರಾಮಯ್ಯ ಅವರಿಗೆ ಗೊತ್ತಿರಬೇಕು. ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುವ ಕೆಲಸ ಕೈಬಿಡಬೇಕು ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರವೇ ರಾಜ್ಯದಲ್ಲಿ ಅಕಾರದಲ್ಲಿದ್ದಾಗ ನೆರೆ ಬಂದ ಸಂದರ್ಭದಲ್ಲಿ ಇದೇ ಸಿದ್ದರಾಮಯ್ಯ ಅವರ ಪಕ್ಷದ ಪ್ರಭಾವಿ ಮುಖಂಡರುಗಳೊಂದಿಗೆ ಚಿದಂಬರಂ ಅವರನ್ನು ಭೇಟಿ ಮಾಡಲು ಬಂದಿದ್ದರು. ಆಗ ಚಿದಂಬರಂ ಒಂದು ನಿಮಿಷವೂ ನಿಲ್ಲದೆ ಎದ್ದು ಹೋಗಿದ್ದರು. ಅಂದು ಸಿದ್ದರಾಮಯ್ಯ ಅವರಿಗೆ ಅವರನ್ನು ಪ್ರಶ್ನೆ ಮಾಡುವ ಧಂ ಇರಲಿಲ್ಲ ಏಕೆ ಎಂದು ಪ್ರಶ್ನಿಸಿದರು.
ಚುನಾವಣೆ ವೇಳೆ ಜಾತಿ ನೆನಪು:
ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್, ಜೆಡಿಎಸ್‍ಗೆ ಜಾತಿ ನೆನಪಾಗುತ್ತದೆ. ಚುನಾವಣೆ ಮುಗಿದ ಕೂಡಲೆ ಅಕಾರ ಉಳಿಸಿಕೊಳ್ಳುವುದು ಹೇಗೆ ಎನ್ನುವ ಚಿಂತೆ ಶುರುವಾಗಿರುತ್ತದೆ. ಬಿಜೆಪಿಯು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆ ಮತ್ತು ಅಭಿವೃದ್ಧಿ ಮಂತ್ರ ಪಠಿಸುತ್ತ ಉಪ ಚುನಾವಣೆಗೆ ಹೊರಟಿದೆ. ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಭಿವೃದ್ಧಿ ಕಾರ್ಯವನ್ನು ನಾವು ಜನರ ಮುಂದಿಟ್ಟಿದ್ದೇವೆ ಎಂದರು.
ಶಿರಾದಲ್ಲಿ ಹತ್ತಾರು ವರ್ಷ ಕಾಂಗ್ರೆಸ್, ಜೆಡಿಎಸ್‍ನ ಕಾರ್ಯವೈಖರಿ ಕಂಡು ಜನ ಬೇಸತ್ತಿದ್ದಾರೆ. ಅವರ ಬಗ್ಗೆ ಆಕ್ರೋಶ ಇದೆ. ಜೆಡಿಎಸ್ ಅಕಾರದಲ್ಲಿದ್ದಾಗ ಶಿರಾದ ಸಮಸ್ಯೆಗಳ ಕಡೆಗೆ ಗಮನ ಕೊಟ್ಟಿರಲಿಲ್ಲ. ಯಡಿಯೂರಪ್ಪ ಸರ್ಕಾರದ ಸಾಧನೆ ಬಗ್ಗೆ ಜನಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ