ಮಾಲಿನ್ಯ ನಿಯಂತ್ರಣಕ್ಕೆ ಕೇಂದ್ರ ಸುಗ್ರೀವಾಜ್ಞೆ ವಾಯು ಮಲಿನಗೊಳಿಸಿದರೆ 5 ವರ್ಷ ಸಜೆ, 1 ಕೋಟಿ ದಂಡ

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿ – ಎನ್‍ಸಿಆರ್‍ನಲ್ಲಿ ವಾಯು ಮಾಲಿನ್ಯ ನಿಯಂತ್ರಿಸಲು ಕೇಂದ್ರ ಸರ್ಕಾರ ಮಹತ್ವದ ಕ್ರಮಕೈಗೊಂಡಿದ್ದು, ಬುಧವಾರ ರಾತ್ರಿ ನೂತನ ಸುಗ್ರೀವಾಜ್ಞೆ ಹೊರಡಿಸಿದೆ.
ಇದರ ಅನ್ವಯ ವಾಯು ಮಾಲಿನ್ಯವನ್ನು ಗಂಭೀರ ಅಪರಾಧವೆಂದು ಉಲ್ಲೇಖಿಸಿದ್ದು, ಮಾಲಿನ್ಯಕ್ಕೆ ಕಾರಣರಾದವರಿಗೆ 1 ಕೋಟಿ ರೂ. ದಂಡದೊಂದಿಗೆ 5 ವರ್ಷಗಳ ಸೆರೆವಾಸದ ಶಿಕ್ಷೆಯಾಗಲಿದೆ. ಜತೆಗೆ ರಾಷ್ಟ್ರ ರಾಜಧಾನಿ ಪ್ರದೇಶ (ಎನ್‍ಸಿಆರ್), ಹರ್ಯಾಣ, ಪಂಜಾಬ್, ರಾಜಸ್ಥಾನ ಹಾಗೂ ಉತ್ತರಪ್ರದೇಶದಲ್ಲಿ ವಾಯು ಗುಣಮಟ್ಟ ನಿರ್ವಹಿಸಲು ಸಮಿತಿ ರಚಿಸುವಂತೆಯೂ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅಂಕಿತ ದೊರೆತ ನಂತರ ಸುಗ್ರೀವಾಜ್ಞೆ ಹೊರಡಿಸಲಾಗಿದೆ.
ವಾಯು ಮಾಲಿನ್ಯಕ್ಕೆ ಕಾರಣವಾಗುವ ಅಂಶಗಳ ಪತ್ತೆಹಚ್ಚಿ, ಇದಕ್ಕೆ ಪರಿಹಾರ ಹುಡುಕಲು ಸಮಿತಿ ರಚಿಸಲಾಗುತ್ತಿದೆ. ಸಮಿತಿಯಲ್ಲಿ 18 ಸದಸ್ಯರಿರಲಿದ್ದು, ಪೂರ್ಣ ಅವಯ ಅಧ್ಯಕ್ಷ ಸಮಿತಿಯ ನೇತೃತ್ವ ವಹಿಸಲಿದ್ದಾರೆ. 18 ಸದಸ್ಯರ ಪೈಕಿ 10 ಮಂದಿ ಅಕಾರಶಾಹಿಗಳಿರಲಿದ್ದು, ಇನ್ನುಳಿದವರು ತಜ್ಞರು ಹಾಗೂ ಸಾಮಾಜಿಕ ಹೋರಾಟಗಾರರು ಇರಲಿದ್ದಾರೆ. ಇನ್ನು ರಾಜ್ಯದ ಹದಗೆಟ್ಟಿರುವ ಹವಾಮಾನ ಪರಿಸ್ಥಿತಿ ಕುರಿತು ಸುಪ್ರೀಂಕೋರ್ಟ್ ಸಹ ವಿಚಾರಣೆ ನಡೆಸುತ್ತಿದೆ.
ಕಳೆದ ಬಾರಿಯ ವಿಚಾರಣೆ ವೇಳೆ, ರಾಜ್ಯದ ಜನರು ತಮ್ಮ ಸುಂದರ ಕಾರ್‍ಗಳನ್ನು ಹೊರತರುವ ಬದಲು, ಸೈಕಲ್ ಬಳಸಬೇಕು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ತಿಳಿಸಿದ್ದರು.
ದಿಲ್ಲಿ ವಾಯು ಪರಿಸ್ಥಿತಿ ಗಂಭೀರ
ಇನ್ನು ಪ್ರಸ್ತುತ ವರ್ಷದಲ್ಲಿ ಇದೇ ಮೊದಲ ಬಾರಿಗೆ ದಿಲ್ಲಿಯ ವಾಯು ಗುಣಮಟ್ಟ ಸೂಚ್ಯಂಕವು ಗಂಭೀರ ವಿಭಾಗಕ್ಕೆ ಕುಸಿದಿದೆ. ಕಳೆದ ಗುರುವಾರ ಸೂಚ್ಯಂಕದಲ್ಲಿ 381 ಅಂಕ ದಾಖಲಾಗುವ ಮೂಲಕ ದಿಲ್ಲಿ ವಾಯು ಗುಣಮಟ್ಟವನ್ನು ತೀವ್ರ ಕಳಪೆ ವಿಭಾಗಕ್ಕೆ ಸೇರಿಸಲಾಗಿತ್ತು. ಆದರೀಗ ಸೂಚ್ಯಂಕದಲ್ಲಿ ವಾಯು ಗುಣಮಟ್ಟ ಅಂಕ 402ಕ್ಕೆ ಏರಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ