ದೇಶದ ಭದ್ರತೆಗೆ ಧಕ್ಕೆ ಬಂದರೆ, ಯಾವುದೇ ರಾಜಿಯಿಲ್ಲ: ದೋವಲ್ ವಿದೇಶಿ ನೆಲದಲ್ಲೂ ನಿಂತು ಶತ್ರುಗಳ ಸಂಹರಿಸುವ ಶಕ್ತಿ

ಹೊಸದಿಲ್ಲಿ: ದೇಶದ ಭದ್ರತೆಗೆ ಧಕ್ಕೆ ಬಂದರೆ ಭಾರತ ತನ್ನ ನೆಲದಿಂದ ಮಾತ್ರವಲ್ಲದೇ, ವಿದೇಶಿ ನೆಲದಲ್ಲೂ ನಿಂತು ವೈರಿಗಳನ್ನು ಹೊಡೆದುರುಳಿಸಲಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ತಿಳಿಸಿದ್ದಾರೆ. ಲಡಾಖ್ ಗಡಿಯಲ್ಲಿ ಚೀನಾದೊಂದಿಗೆ ಗಡಿ ಬಿಕ್ಕಟ್ಟು ಮುಂದುವರಿದಿರುವ ನಡುವೆಯೇ ದೋವಲ್ ಈ ಹೇಳಿಕೆ ನೀಡಿರುವುದು ಸಾಕಷ್ಟು ಮಹತ್ವ ಪಡೆದಿದೆ.
ಉತ್ತರಾಖಂಡದ ರಿಷಿಕೇಶದಲ್ಲಿನ ಪರಮಾರ್ಥ ನಿಕೇತನ ಆಶ್ರಮ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನವ ಭಾರತದಲ್ಲಿ ದೇಶದ ಭದ್ರತೆಯೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳಲಾಗುವುದಿಲ್ಲ ಎಂದರು.
ಕೇವಲ ತನ್ನ ನೆಲದಿಂದಲೇ ವೈರಿಗಳನ್ನು ಹೊಡೆದುರುಳಿಸಬೇಕೆಂಬುದು ಅಗತ್ಯವಿಲ್ಲ. ದೇಶದ ಭದ್ರತೆಗೆ ಎಲ್ಲಿ ಅಪಾಯ ಉಂಟಾಗುತ್ತದೋ, ಅಲ್ಲಿಂದಲೇ ವೈರಿಗಳನ್ನು ನಾಶಮಾಡಲು ಭಾರತ ಸಿದ್ಧವಿದೆ ಎಂದು ತಿಳಿಸಿದ್ದಾರೆ.
ಭಾರತ ಎಂದಿಗೂ ಮೊದಲು ದಾಳಿ ನಡೆಸಲ್ಲ ಸರಿ. ಆದರೆ ದೇಶದ ಭದ್ರತೆಗೆ ಅಪಾಯ ಉಂಟುಮಾಡುವ ಅಂಶಗಳನ್ನು ಭಾರತ ಪೂರ್ವಭಾವಿಯಾಗಿ ಹತ್ತಿಕ್ಕಬೇಕೆಂಬ ನೂತನ ಚಿಂತನೆ ದೇಶದಲ್ಲಿ ಬೇರೂರಿದೆ. ಹಾಗಾಗಿ ನವ ಭಾರತವು ದೇಶದ ಹಿತಾಸಕ್ತಿಗಾಗಿ ದೇಶ ವಿರೋ ಅಂಶಗಳನ್ನು ಹತ್ತಿಕ್ಕಲು ಸದಾ ಸಿದ್ಧವಿರಲಿದೆ ಎಂದು ಹೇಳಿದ್ದಾರೆ.
ನಮ್ಮ ಸಂಸ್ಕøತಿ ಇತರರಿಗೆ ಹಾನಿ ಮಾಡುವುದನ್ನು ಕಲಿಸುವುದಿಲ್ಲ. ವೈಯಕ್ತಿಕ ಹಿತಾಸಕ್ತಿಯಿಂದ ಭಾರತ ಎಂದಿಗೂ ಯಾವುದೇ ಕಾರ್ಯ ಕೈಗೊಂಡಿಲ್ಲ. ತನ್ನ ನೆಲದಲ್ಲಿ, ಹೊರದೇಶದಲ್ಲಿ ಹೋರಾಡಲು ದೇಶ ಸಿದ್ಧವಿದ್ದರೂ, ಅದು ಕೇವಲ ದೇಶದ ಹಿತಾಸಕ್ತಿಗಾಗಿ ಎಂದಿದ್ದಾರೆ.
ನಮ್ಮದು ನಾಗರಿಕ ರಾಷ್ಟ್ರ. ಯಾವುದೋ ಒಂದು ಭಾಷೆ, ಧರ್ಮ, ವರ್ಗದವರನ್ನು ಆಧಾರಿಸಿಲ್ಲ. ಅನೇಕ ಋಷಿ, ಮುನಿಗಳು ದೇಶಕ್ಕೆ ಭದ್ರ ಬುನಾದಿ ಹಾಕಿಕೊಡುವುದರೊಂದಿಗೆ, ಶಾಂತಿ ಮಂತ್ರವನ್ನು ಪಸರಿಸಿದ್ದಾರೆ. ಹಾಗಾಗಿ ನಮ್ಮ ದೇಶದ ಅಡಿಪಾಯ ನಮ್ಮ ಸಂಪ್ರದಾಯವಾಗಿದ್ದು, ನಮ್ಮೆಲ್ಲಾ ಕಾರ್ಯದಲ್ಲೂ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ