ಉಪಸಮರ ವಾಕ್ಸಮರ

ಬೆಂಗಳೂರು: ಉಪಸಮರದಲ್ಲಿ ಗೆಲ್ಲಲು ಮತದಾರರ ಓಲೈಕೆಗಾಗಿ ಆರೋಪ- ಪ್ರತ್ಯಾರೋಪಗಳಲ್ಲಿ ತೊಡಗಿರುವ ರಾಜಕೀಯ ನಾಯಕರು, ವಾಕ್ಸಮರಕ್ಕಿಳಿದಿದ್ದಾರೆ
ರಾಜರಾಜೇಶ್ವರಿ ನಗರ, ಶಿರಾ ವಿಧಾನಸಭಾ ಕ್ಷೇತ್ರಗಳ ಉಪಕದನ ಕುತೂಹಲ ಹೆಚ್ಚಿಸಿಕೊಳ್ಳುತ್ತಿದ್ದು, ಎದುರಾಳಿಗಳ ಮೇಲೆ ಕೆಸರೆರಚಾಟ ನಡೆಸಲಾರಂಭಿಸಿದ್ದಾರೆ. ತಂತಮ್ಮ ಅಭ್ಯರ್ಥಿಗಳ ಸಾಮಥ್ರ್ಯ ಹಾಗೂ ಸಾಧನೆಗಿಂತ ಹೆಚ್ಚಾಗಿ ಎದುರಾಳಿಯ ವಿರುದ್ಧ ಹರಿಹಾಯುವ ಮೂಲಕ ಮತದಾರರನ್ನು ತಲುಪುವ ಪ್ರಯತ್ನಗಳು ನಡೆಯುತ್ತಿದೆ.
ಸಾಲದ್ದಕ್ಕೆ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಹೈಡ್ರಾಮಾವೊಂದು ನಡೆದಿದ್ದು, ಕಾಂಗ್ರೆಸ್ – ಬಿಜೆಪಿ ಕಾರ್ಯಕರ್ತರು ಕೈ ಮಿಲಾಯಿಸಿದ್ದಾರೆ. ಇಬ್ಬರ ಸಹವಾಸ ಬೇಡ ಎಂದು ದೂರ ಉಳಿದಿರುವ ಜೆಡಿಎಸ್, ಆರೋಪ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ.
ಆರ್.ಆರ್. ನಗರದಲ್ಲಿ ಹೈಡ್ರಾಮ
ಕ್ಷೇತ್ರದ ಲಕ್ಷ್ಮೀದೇವಿ ನಗರ ವಾರ್ಡ್‍ನಲ್ಲಿ ಕಾಂಗ್ರೆಸಿಗರು ಮತದಾರರ ಗುರುತಿನ ಚೀಟಿ, ಬ್ಯಾಂಕ್ ಖಾತೆ ಸಂಖ್ಯೆಗಳನ್ನು ಪಡೆದು ಆಮಿಷವೊಡ್ಡುತ್ತಿದ್ದರು ಎಂದು ಬಿಜೆಪಿ ಆರೋಪಿಸುತ್ತಿದ್ದರೆ, ಪ್ರಚಾರಕ್ಕೆ ಅಡ್ಡಿಪಡಿಸಿ, ಮತದಾರರ ಪಟ್ಟಿಯನ್ನು ಹರಿದುಹಾಕಿ ಕಾರ್ಯಕರ್ತರನ್ನು ಬೆದರಿಸಲಾಗಿದೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಕತ್ತಿ ಮಸೆದಿದೆ. ಎರಡೂ ಪಕ್ಷದವರು ನಂದಿನಿ ಲೇಔಟ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದು, ಬಿಜೆಪಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸಿಗರು ಠಾಣೆ ಎದುರು ಪ್ರತಿಭಟನೆಯನ್ನೂ ನಡೆಸಿದರು. ಇತ್ತ ಜೆಡಿಎಸ್‍ನ ವಿ.ಕೃಷ್ಣಮೂರ್ತಿ, ಪಕ್ಷದಿಂದ ಎಷ್ಟೇ ಜನರನ್ನು ರಾಷ್ಟ್ರೀಯ ಪಕ್ಷಗಳು ಸೆಳೆದರೂ ಅವುಗಳ ವಿರುದ್ಧದ ಹೋರಾಟ ನಿಲ್ಲುವುದಿಲ್ಲ ಎಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ