ಪ್ರವಾಹಬಾತ ಕಲ್ಯಾಣ ಕರ್ನಾಟಕದಲ್ಲಿ ಸಿಎಂ ವೈಮಾನಿಕ ಸಮೀಕ್ಷೆ ಮಳೆ ತಗ್ಗಿದರೂ ಇಳಿಯದ ನೆರೆ | ತುಂಬಿ ಹರಿಯುತ್ತಿವೆ ಹಳ್ಳ-ಕೊಳ್ಳ

ಬೆಂಗಳೂರು: ಪ್ರಸಕ್ತ ಮುಂಗಾರು ಅವಯಲ್ಲಿ ಅತಿವೃಷ್ಟಿಯಿಂದಾಗಿ ನಾಡಿನ ಅನೇಕ ಭಾಗಗಳು ಸಂಕಷ್ಟಕ್ಕೆ ಸಿಲುಕಿದ್ದು, ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದ ಜನರಂತೂ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
ಸಾವಿರಾರು ಕೋಟಿ ರೂ. ನಷ್ಟ ಸಂಭವಿಸಿದ್ದು, ಜನ-ಜಾನುವಾರು, ಬೆಳೆ, ರಸ್ತೆ, ಸೇತುವೆ ಸೇರಿದಂತೆ ಆಸ್ತಿಪಾಸ್ತಿ ಕೊಚ್ಚಿ ಹೋಗಿ ಅಪಾರ ಹಾನಿಯಾಗಿದೆ. ಬಹುತೇಕ ಕಡೆಗಳಲ್ಲಿ ಮಳೆ ತಗ್ಗಿದ್ದರೂ ನೆರೆ ಮಾತ್ರ ಇಳಿದಿಲ್ಲ. ಇತ್ತ ಬೆಂಗಳೂರಿನಲ್ಲಿಯೂ ಭಾರೀ ಮಳೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಇದರ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವೈಮಾನಿಕ ಸಮೀಕ್ಷೆ ಕೈಗೊಂಡಿದ್ದು, ನಷ್ಟದ ಅಂದಾಜು ಮಾಹಿತಿ ಪಡೆದರು. ಅಷ್ಟೇ ಅಲ್ಲದೆ, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಕೈಗೊಳ್ಳಲಾದ ನೆರೆ ಪರಿಹಾರ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಮುಖವಾಗಿ ರಕ್ಷಣಾ ಕಾರ್ಯಕ್ಕೆ ರಾಜ್ಯ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರವೂ ಸಿದ್ಧವಿದೆ. ಇದನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ತಿಳಿಸಿದ್ದು, ಈ ವಿಚಾರದಲ್ಲಿ ಯಾವುದೇ ನೆರವಿಗೂ ಸರ್ಕಾರಗಳು ಸಿದ್ಧವಿದೆ. ಹೆದರಿಕೆ ಬೇಡ ಎಂದು ಅಕಾರಿಗಳಿಗೆ ಧೈರ್ಯ ತುಂಬಿದರು.
ಇನ್ನು ಕಾಳಜಿ ಕೇಂದ್ರದಲ್ಲಿ ಯಾವುದೇ ಸಮಸ್ಯೆ ಆಗಬಾರದು. ನಷ್ಟವಾಗಿರುವ ವಿದ್ಯುತ್ ಕಂಬಗಳ ಮರುಸ್ಥಾಪನೆ ಮಾಡಿ ತಕ್ಷಣವೇ ವಿದ್ಯುತ್ ಸಂಪರ್ಕ ಕೊಡಬೇಕು. ಕುಡಿಯುವ ನೀರಿನ ವ್ಯವಸ್ಥೆಯನ್ನು ಕೂಡಲೇ ಮಾಡಬೇಕು. ಅನಿವಾರ್ಯ ಇರುವ ಕಡೆಗಳಲ್ಲಿ ರಸ್ತೆ, ಸೇತುವೆ ಸಂಪರ್ಕಗಳನ್ನೂ ಕಲ್ಪಿಸಬೇಕು. ತಾತ್ಕಾಲಿಕ ಪರಿಹಾರ ಕಾರ್ಯಗಳು ಚುರುಕಾಗಿ ಆಗಬೇಕು. ಹಂತ-ಹಂತವಾಗಿ ಶಾಶ್ವತ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಿ ಎಂದು ಸೂಚಿಸಿದರು.
ಮಳೆ ತಗ್ಗಿದರೂ, ಇಳಿಯದ ನೆರೆ
ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಉಂಟಾದ ಅತಿವೃಷ್ಟಿಯಿಂದ ಜಲಾಶಯಗಳ ಹೊರಹರಿವು ಹೆಚ್ಚಾಗಿತ್ತು. ಸಾಲದ್ದಕ್ಕೆ ಇದಕ್ಕೆ ಹೊಂದಿಕೊಂಡಂತಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿಯೂ ಮಳೆ ಯಥೇಚ್ಚವಾಗಿ ಸುರಿದಿದ್ದರಿಂದ ನದಿಗಳು ಉಕ್ಕಿ ಹರಿದು ಊಹಿಸಲು ಸಾಧ್ಯವಾಗದ ಹಾನಿ ಉಂಟಾಗಿದೆ. ಕೆಲವೆಡೆ ಮಳೆ ಪ್ರಮಾಣ ಕಡಿಮೆಯಾಗಿದೆಯಾದರೂ ಹರಿದು ಬರುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗಿಲ್ಲ. ತತ್ಪರಿಣಾಮವಾಗಿ ನೆರೆ ಇಳಿದಿಲ್ಲ. ಬದಲಿಗೆ ಕೆರೆ-ಕಟ್ಟೆಗಳು ತುಂಬಿ ಹರಿಯುತ್ತಿವೆ. ಆದರೆ, ಆರ್ಭಟ ಕಡಿಮೆ ಆಗಿದೆ ಎನ್ನಬಹುದು. ಜನಜೀವನ ಸಹಜ ಸ್ಥಿತಿಯತ್ತ ಬರಲು ಸಾಕಷ್ಟು ಸಮಯಾವಕಾಶವಂತೂ ಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ