ದಸರಾಗೆ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ; ಉದ್ಘಾಟನೆಗೆ 200 ಮಂದಿಗೆ ಮಾತ್ರ ಅವಕಾಶ

ಬೆಂಗಳೂರು: ಮೈಸೂರು ದಸರಾ ಸೇರಿದಂತೆ ರಾಜ್ಯದ ವಿವಿಧೆಡೆ ಆಚರಿಸಲಾಗುವ ದಸರಾಗೆ ಮಾರ್ಗಸೂಚಿಗಳನ್ನ ಸರ್ಕಾರ ಇಂದು ಬಿಡುಗಡೆ ಮಾಡಿದೆ. ನವರಾತ್ರಿ, ದುರ್ಗಾ ಪೂಜೆಯ ಆಚರಣೆಗಳಿಗೂ ಇವೇ ಮಾರ್ಗಸೂಚಿಗಳು ಅನ್ವಯವಾಗಲಿವೆ. ಕೋವಿಡ್ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊರಡಿಸಿರುವ ನಿರ್ದೇಶನಗಳನ್ನ ತಪ್ಪದೇ ಪಾಲಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಮೈಸೂರಿನ ಚಾಮುಂಡೇಶ್ವರಿ ಬೆಟ್ಟದಲ್ಲಿ ಅ. 17ರಂದು ನಡೆಯಲಿರುವ ದಸರಾ ಉದ್ಘಾಟನಾ ಸಮಾರಂಭದಲ್ಲಿ ಗರಿಷ್ಠ 200 ಮಂದಿ ಮಾತ್ರ ಪಾಲ್ಗೊಳ್ಳಬಹುದು ಎಂದು ತಿಳಿಸಲಾಗಿದೆ. ಒಟ್ಟಾರೆ, ಸಾರ್ವಜನಿಕರಿಗೆ ಈ ಬಾರಿ ದಸರಾವನ್ನು ನೇರವಾಗಿ ವೀಕ್ಷಿಸದಂತೆ ನಿರ್ಬಂಧಿಸಲಾಗಿದೆ.
ಕರ್ತವ್ಯನಿರತ ಸಿಬ್ಬಂದಿ, ಕಲಾವಿದರು ಮತ್ತು ಮಾಧ್ಯಮದವರೂ ಒಳಗೊಂಡಂತೆ 200ಕ್ಕೂ ಹೆಚ್ಚು ಜನರು ಉದ್ಘಾಟನಾ ಕಾರ್ಯಕ್ರಮದಲ್ಲಿ ಇರಬಾರದು ಎಂದು ಸೂಚಿಸಲಾಗಿದೆ. ಹಾಗೆಯೇ, ಅ. 17ರಿಂದ ಎಂಟು ದಿನ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ 50ಕ್ಕಿಂತ ಹೆಚ್ಚು ಮಂದಿ ಇರಬಾರದು. ಅಕ್ಟೋಬರ್ 26ರಂದು ನಡೆಯುವ ಜಂಬೂ ಸವಾರಿಯಲ್ಲಿ 300ಕ್ಕಿಂತ ಹೆಚ್ಚು ಮಂದಿಗೆ ಪ್ರವೇಶ ನೀಡುವಂತಿಲ್ಲ. ಅ. 17ರಿಂದ ಹತ್ತು ದಿನಗಳ ಕಾಲ ಸಂಜೆ 7ರಿಂದ 9ರವರೆಗೆ ಆಯ್ದ ಸ್ಥಳಗಳಲ್ಲಿ ದೀಪದ ವ್ಯವಸ್ಥೆ ಮಾಡಬೇಕು. ಈ ಸಂದರ್ಭದಲ್ಲಿ ಅಂಥ ಸ್ಥಳಗಳಲ್ಲಿ ಜನದಟ್ಟಣೆ ಸೇರಿದಂತೆ ಪೆÇಲೀಸರು ಕ್ರಮ ತೆಗೆದುಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ಅಪ್ಪಣೆ ಮಾಡಲಾಗಿದೆ.
ದಸರಾ ಆಚರಣೆಯಲ್ಲಿ ಭಾಗವಹಿಸುವ ಕರ್ತವ್ಯನಿರತ ಸಿಬ್ಬಂದಿ, ಮಾಧ್ಯಮ ಮೊದಲಾದ ಪ್ರತಿಯೊಬ್ಬರೂ ಕೂಡ ಅ. 14ರ ನಂತರ ಆರ್ಟಿಪಿಸಿಆರ್ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ನೆಗಟಿವ್ ಇರುವ ದಾಖಲಾತಿಯನ್ನು ಕಡ್ಡಾಯವಾಗಿ ತಂದಿರಬೇಕು. ದೈಹಿಕ ಅಂತರ, ಮುಖಗವಸು ಇತ್ಯಾದಿ ಕೋವಿಡ್ ನಿರ್ದೇಶನಗಳನ್ನ, ಮಾರ್ಗಸೂಚಿಗಳನ್ನ ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 188ರ ಅಡಿಯಲ್ಲಿ ಶಿಸ್ತಿನ ಕ್ರಮ ಜರುಗಿಸಬೇಕು ಎಂದು ಸೂಚಿಸಲಾಗಿದೆ.
ಮೈಸೂರಿನ ದಸರಾ ಮಹೋತ್ಸವದ ಎಲ್ಲಾ ಕಾರ್ಯಕ್ರಮಗಳನ್ನ ದೃಶ್ಯ ಸಂವಹನ (ವರ್ಚುವಲ್) ಮೂಲಕ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ ಈ ಕಾರ್ಯಕ್ರಮಗಳಲ್ಲಿ ನೇರವಾಗಿ ಪಾಲ್ಗೊಳ್ಳಲು ಅನುಮತಿ ಇಲ್ಲ. ಆನ್ಲೈನ್ ವ್ಯವಸ್ಥೆಯ ಮೂಲಕ ಅವರು ಕಾರ್ಯಕ್ರಮ ವೀಕ್ಷಿಸಬಹುದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ