ಹೊಸದಿಲ್ಲಿ: ಗ್ರಾಮೀಣ ಭಾರತದಲ್ಲಿ ಪರಿವರ್ತನೆ ಹಾಗೂ ಲಕ್ಷಾಂತರ ಭಾರತೀಯರ ಸಬಲೀಕರಣಕ್ಕೆ ಕಾರಣವಾಗುವ ಐತಿಹಾಸಿಕ ಯೋಜನೆ ಸ್ವಮಿತ್ವ ಅನ್ವಯ ಆಸ್ತಿ ಕಾರ್ಡ್‍ಗಳ ಭೌತಿಕ ವಿತರಣೆಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನರೆನ್ಸ್ ಮೂಲಕ ಅಕ್ಟೋಬರ್ 11 ರಂದು ಚಾಲನೆ ನೀಡಲಿದ್ದಾರೆ.
ಈ ಯೋಜನೆಯ ಚಾಲನೆಯಿಂದಾಗಿ ಸುಮಾರು ಒಂದು ಲಕ್ಷ ಆಸ್ತಿ ಮಾಲೀಕರು ತಮ್ಮ ಮೊಬೈಲ್‍ನ ಎಸ್‍ಎಂಎಸ್ ಲಿಂಕ್ ಮೂಲಕ ಆಸ್ತಿ ಕಾರ್ಡ್ ಡೌನ್‍ಲೋಡ್ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದರ ನಂತರ ಆಯಾ ರಾಜ್ಯ ಸರ್ಕಾರಗಳು ಆಸ್ತಿ ಕಾರ್ಡ್‍ಗಳನ್ನು ಭೌತಿಕವಾಗಿ ವಿತರಿಸುತ್ತವೆ. ಆರು ರಾಜ್ಯಗಳ 763 ಗ್ರಾಮಗಳ ಜನರು ಯೋಜನೆಯ ಫಲಾನುಭವಿಗಳಾಗಿದ್ದಾರೆ. ಇದರಲ್ಲಿ ಉತ್ತರ ಪ್ರದೇಶದ 346, ಹರ್ಯಾಣದ 221, ಮಹಾರಾಷ್ಟ್ರದ 100, ಮಧ್ಯಪ್ರದೇಶದ 44, ಉತ್ತರಾಖಂಡದ 50 ಮತ್ತು ಕರ್ನಾಟಕದ 2 ಹಳ್ಳಿಗಳು ಸೇರಿವೆ. ಮಹಾರಾಷ್ಟ್ರವನ್ನು ಹೊರತುಪಡಿಸಿ ಈ ಎಲ್ಲ ರಾಜ್ಯಗಳ ಫಲಾನುಭವಿಗಳು ಒಂದೇ ದಿನದಲ್ಲಿ ಆಸ್ತಿ ಕಾರ್ಡ್‍ಗಳ ಭೌತಿಕ ಪ್ರತಿಗಳನ್ನು ಸ್ವೀಕರಿಸಲಿದ್ದಾರೆ.
ಮಹಾರಾಷ್ಟ್ರವು ಆಸ್ತಿ ಕಾರ್ಡ್ ಅತ್ಯಲ್ಪ ವೆಚ್ಚವನ್ನು ಪಡೆಯುವ ವ್ಯವಸ್ಥೆಯನ್ನು ಹೊಂದಿದ್ದು, ಇದು ಕಾರ್ಡ್ ವಿತರಿಸಲು ಒಂದು ತಿಂಗಳ ಸಮಯ ತೆಗೆದುಕೊಳ್ಳುತ್ತದೆ.
ಸಾಲ ಮತ್ತು ಇತರ ಹಣಕಾಸಿನ ಪ್ರಯೋಜನಗಳನ್ನು ಪಡೆಯಲು ಗ್ರಾಮಸ್ಥರು ಆಸ್ತಿಯನ್ನು ಆರ್ಥಿಕ ಆಸ್ತಿಯಾಗಿ ಬಳಸಲು ಈ ಕ್ರಮವು ದಾರಿ ಮಾಡಿಕೊಡುತ್ತದೆ. ಅಲ್ಲದೆ, ಇದೇ ಮೊದಲ ಬಾರಿಗೆ ಲಕ್ಷಾಂತರ ಗ್ರಾಮೀಣ ಆಸ್ತಿ ಮಾಲೀಕರಿಗೆ ಅನುಕೂಲ ಕಲ್ಪಿಸುವ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡ ಯೋಜನೆ ಜಾರಿಗೊಳಿಸಲಾಗುತ್ತದೆ.
ಇನ್ನು ಯೋಜನೆಗೆ ಚಾಲನೆ ನೀಡಿ, ಪ್ರಧಾನಿ ಕೆಲ ಫಲಾನುಭವಿಗಳೊಂದಿಗೂ ಸಂವಾದ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಪಂಚಾಯತಿ ರಾಜ್ ಸಚಿವರು ಉಪಸ್ಥಿತರಿರುತ್ತಾರೆ. ಕಾರ್ಯಕ್ರಮವು ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗಲಿದೆ.