ಬೆಳ್ಳಂಬೆಳಗ್ಗೆ ಸಚಿವ ಎಸ್.ಟಿ.ಸೋಮಶೇಖರ್ ರವರಿಂದ ಮೈಸೂರಿನಲ್ಲಿ ರೌಂಡ್ಸ್

ಮೈಸೂರು: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು, ಶನಿವಾರ ಬೆಳಗ್ಗೆ ಮೈಸೂರಿನಲ್ಲಿ ನಗರ ಪ್ರದಕ್ಷಿಣೆ ನಡೆಸಿ, ರೈತರ ಅಹವಾಲುಗಳನ್ನು ಆಲಿಸಿದರು.ಎಪಿಎಂಸಿಗೆ ಭೇಟಿ ನೀಡಿ, ಕೊರೋನಾ ಸೋಂಕು ನಿವಾರಕ ಟನಲ್ ನಲ್ಲಿ ಆಗಮಿಸಿ, ಅದನ್ನು ಉದ್ಘಾಟನೆ ಮಾಡುವ ಮೂಲಕ ಎಲ್ಲರೂ ಕಡ್ಡಾಯವಾಗಿ ನಿಯಮ ಪಾಲಿಸಬೇಕು ಎಂಬ ಸಂದೇಶ ನೀಡಿದರು.

ಬಳಿಕ ಅಲ್ಲಿ ವರ್ತಕರಿಂದಲೇ ಕೈಗೊಳ್ಳಲಾಗಿರುವ ವ್ಯವಸ್ಥೆ ಸಮರ್ಪಕವಾಗಿದೆಯೇ ಎಂದು ತಿಳಿದುಕೊಂಡರು. ಎಲ್ಲ ಸಮಸ್ಯೆಗಳಿಗೂ ತಕ್ಷಣವೇ ಸ್ಪಂದನೆ ಸಿಗಲಿದೆ, ಆತಂಕ ಪಡುವ ಅಗತ್ಯವಿಲ್ಲ ಎಂದು ಅಭಯ ಮಾಡಿದರು.

ಇದೇ ವೇಳೆ, ಮಾರ್ಕೆಟ್ ನಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಸೂಚನೆ ನೀಡಿದರು. ರೈತರು ಹಾಗೂ ವರ್ತಕರ ಸಮಸ್ಯೆಗಳನ್ನು ಆಲಿಸಿದ ಸಚಿವರು, ಸಹಕಾರ ಹಾಗೂ ಸಹಾಯಕ್ಕೆ ಸರ್ಕಾರ ಯಾವಾಗಲೂ ಬದ್ಧವಿದೆ. ನಿಮ್ಮ ಸ್ಪಂದನೆಗೆ ನಾನು ಸದಾ ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು.

ತರಕಾರಿಗಳನ್ನು ಮಾರುಕಟ್ಟೆಗೆ ಸಾಗಿಸುವ ವೇಳೆ ಚೆಕ್ ಪೋಸ್ಟ್ ಸೇರಿದಂತೆ ಎಲ್ಲೂ ಯಾವುದೇ ತೊಂದರೆಯಾಗಿಲ್ಲವೇ? ಸೂಕ್ತ ಬೆಲೆ ಸಿಗುತ್ತಿದೆಯೇ ಎಂದು ಪ್ರಶ್ನಿಸಿದ ಸಚಿವರು, ಸಮಸ್ಯೆ ಇದ್ದರೆ ತಕ್ಷಣ ಗಮನಕ್ಕೆ ತರುವಂತೆ ಸೂಚಿಸಿದರು.

ಶೀಘ್ರ ಕೋಲ್ಡ್ ಸ್ಟೋರೇಜ್

ಎಪಿಎಂಸಿ ಗೆ ಭೇಟಿ ನೀಡಿ ಇಲ್ಲಿನ ವ್ಯವಸ್ಥೆ ಗಳನ್ನು ಪರಿಶೀಲಿಸುತ್ತಿದ್ದೇನೆ. ಸಮಸ್ಯೆಗಳ ಪರಿಹಾರವೇ ನನ್ನ ಮೊದಲ ಆದ್ಯತೆ. ಪೊಲೀಸರಿಂದ ಸೇರಿ ಯಾರಿಂದಲೂ ಸಮಸ್ಯೆ ಆಗಬಾರದು ಎಂಬುದು ಮುಖ್ಯಮಂತ್ರಿಗಳ ಉದ್ದೇಶ . ಹೀಗಾಗಿ ಖುದ್ದು ನಾನೇ ಭೇಟಿ ಮಾಡಿ ಸಮಸ್ಯೆಗೆ ಪರಿಹಾರ ಸೂಚಿಸುತ್ತಿದ್ದೇನೆ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.

ಎಪಿಎಂಸಿಗೆ ಕೋಲ್ಡ್ ಸ್ಟೋರೇಜ್ ಸಿಸ್ಟಮ್ ಅಳವಡಿಸಬೇಕಿದೆ. ಆ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಪಡೆದು ಕ್ರಮ‌ ಕೈಗೊಳ್ಳುತ್ತೇನೆ. ಕೋಲ್ಡ್ ಸ್ಟೋರೆಜ್ ಇದ್ದರೆ ತರಕಾರಿ ಇಟ್ಟು ಮಾರಲು ರೈತರಿಗೆ ಅನುಕೂಲ ಆಗಲಿದೆ. ಇದರಿಂದ ತರಕಾರಿ ಕೊಳೆಯುವಿಕೆಗೆ ಬ್ರೇಕ್ ಬೀಳಲಿದೆ ಎಂದು ತಿಳಿಸಿದರು.

ರೈತರಿಗೆ ಸರಿಯಾದ ಬೆಂಬಲ ಬೆಲೆ ಸಿಗದೆ ತರಕಾರಿ ನಾಶಪಡಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ರೈತರಿಂದ ತರಕಾರಿ, ಹಣ್ಣು ಗಳನ್ನು
ಸರ್ಕಾರದಿಂದಲೇ ಖರೀದಿ ಮಾಡುವ ಬಗ್ಗೆ ಯೋಚನೆ ಮಾಡುತ್ತೇವೆ.

ಕೆಲವೆಡೆ ಈಗಾಗಲೇ ಆ ಕೆಲಸ‌ ಆಗುತ್ತಿದೆ. ರೈತರಿಂದ ಪಡೆದು ಉತ್ಪನ್ನ ಗಳನ್ನು ಹಾಪ್ ಕಾಮ್ಸ್ ಮೂಲಕ ಮಾರಾಟದ ಬಗ್ಗೆ ಚಿಂತನೆ ಇದೆ.

ಜನಪ್ರತಿನಿಧಿಗಳು ಅಧಿಕಾರಿಗಳ ಬಳಿ ಈ ಬಗ್ಗೆ ಚರ್ಚಿಸಿ ಕ್ರಮ‌ ಕೈಗೊಳ್ಳುತ್ತೇನೆ ಎಂದು ತಿಳಿಸಿದರು. ಈ ವೇಳೆ ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮತ್ತಿತರರು ಇದ್ದರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ