ಅಕ್ರಮ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವವರಿಗೆ ಕೇಂದ್ರ ಸರ್ಕಾರ ಖಡಕ್ ಎಚ್ಚರಿಕೆ

ನವದೆಹಲಿ, ಏ.8-ಕೊರೊನಾ ಹಾವಳಿಯಿಂದಾಗಿ ದೇಶದಲ್ಲಿ ಜಾರಿಯಲ್ಲಿರುವ ಲಾಕ್‍ಡೌನ್ ಪರಿಸ್ಥಿತಿಯ ದುರ್ಲಾಭ ಪಡೆದು ಅಗತ್ಯ ವಸ್ತುಗಳ ಅಕ್ರಮ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವವರಿಗೆ ಕೇಂದ್ರ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ.

ಅಕ್ರಮ ದಾಸ್ತಾನು ಮಾಡಿ ಕೃತಕ ಕೊರತೆ ಸೃಷ್ಟಿಸಿ ಬ್ಲಾಕ್ ಮಾರ್ಕೆಟ್‍ನಲ್ಲಿ ಮಾರಾಟ ಮಾಡುವವರ ವಿರುದ್ಧ ಅಗತ್ಯ ಸರಕುಗಳ ಕಾಯ್ದೆ 1955ರ ಅಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಂಥ ಕೃತ್ಯಗಳನ್ನು ಅಪರಾಧಗಳಾಗಿದ್ದು, ಏಳು ವರ್ಷ ಕಾರಾಗೃಹ ಶಿಕ್ಷೆ ಅಥವಾ ದಂಡ ಅಥವಾ ಸಜೆ ಮತ್ತು ಜುಲ್ಮಾನೆ ಎರಡನ್ನೂ ವಿಧಿಸಾಗುವುದು ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‍ಎ) ವಾರ್ನಿಂಗ್ ನೀಡಿದೆ.

ಈ ಮೂಲಕ ಅಕ್ರಮ ದಾಸ್ತಾನು ಮಾಡುವವರು, ಕೃತಕ ಅಭಾವ ಸೃಷ್ಟಿಸುವವರು, ಕಾಳಸಂತೆಕೋರರು ಮತ್ತು ಅಗತ್ಯ ಸರಕುಗಳನ್ನು ಸೋರಿಕೆ ಮಾಡುವವರಿಗೆ ಸ್ಪಷ್ಟ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಈ ಕುರಿತು ಇಂದು ಬೆಳಗ್ಗೆ ಅಧಿಸೂಚನೆಯೊಂದನ್ನು ಹೊರಡಿಸಿರುವ ಗೃಹ ಸಚಿವಾಲಯ ದೇಶದ ಎಲ್ಲ ರಾಜ್ಯಗಳನ್ನು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅಗತ್ಯ ಸರಕುಗಳ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸೂಚನೆ ನೀಡಿದೆ. ಈ ಮೂಲಕ ಕೃತಕ ಅಭಾವ ಸೃಷ್ಟಿ ಮತ್ತು ಕಾಳಸಂತೆ ವಹಿವಾಟಿಗೆ ಕಡಿವಾಣ ಹಾಕಿ ಬಡವರು ಮತ್ತು ಶ್ರೀಸಾಮಾನ್ಯರ ಹಿತರಕ್ಷಣೆಗೆ ದಿಟ್ಟ ಹೆಜ್ಜೆ ಇಟ್ಟಿದೆ.

ಅಲ್ಲದೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಸಂಬಂದ ಕೆಲವು ಗೃಹ ಸಚಿವಾಲಯದ ಅಜಯ್ ಭಳ್ಳ ಅವರು ನಿರ್ದೇಶನಗಳನ್ನೂ ಸಹ ನೀಡಿದೆ.
ಇಂಥ ಕೃತ್ಯಗಳಲ್ಲಿ ತೊಡಗುವವರನ್ನು ಶಿಕ್ಷಿಸಲು ಕಠಿಣ ಕ್ರಮಗಳನ್ನು ಜಾರಿಗೊಳಿಸುವಂತೆಯೂ ಅವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಿದ್ದಾರೆ.

ಅಗತ್ಯ ವಸ್ತುಗಳು ಮತ್ತು ಸರಕುಗಳ ದಾಸ್ತಾನು ಮಿತಿಯನ್ನು ನಿಗದಿಗೊಳಿಸಬೇಕು. ಬೆಲೆಗಳನ್ನು ಸೂಕ್ತವಾಗಿ ನಿರ್ಧರಿಸಬೇಕು ಹಾಗೂ ಉತ್ಪಾದನೆಯನ್ನು ಹೆಚ್ಚಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಜಯ್ ಭಳ್ಳ ಸೂಚಿಸಿದ್ದಾರೆ.

ಕೊರೊನಾ ಸಂಕಷ್ಟ, ಲಾಕ್‍ಡೌನ್ ಮತ್ತು ಕಾರ್ಮಿಕರ ಅಭಾವ ಸೇರಿದಂತೆ ವಿವಿಧ ಕಾರಣಗಳಿಂದಾಗಿ ದೇಶದಲ್ಲಿ ಅಗತ್ಯ ವಸ್ತುಗಳ ಉತ್ಪಾದನೆ ನಷ್ಟದ ಬಗ್ಗೆ ವರದಿಗಳಿಲ್ಲ. ಆದರೆ ಅಕ್ರಮ ದಾಸ್ತಾನು, ಕೃತಕ ಅಭಾವ ಸೃಷ್ಟಿ ಮತ್ತು ಬ್ಲಾಕ್ ಮಾರ್ಕೆಟ್‍ನಲ್ಲಿ ಮಾರಾಟ ಹಾಗೂ ಸೋರಿಕೆಗೆ ಈ ಪರಿಸ್ಥಿತಿ ಎಡೆ ಮಾಡಿಕೊಡಬಹುದೆಂದು ಸಚಿವಾಲಯ ಸಂಶಯ ವ್ಯಕ್ತಪಡಿಸಿದೆ.

ಇಂಥ ಕೃತ್ಯಗಳಲ್ಲಿ ಅಗತ್ಯ ಸರಕುಗಳ ಕಾಯ್ದೆಯ ವಿವಿಧ ಸೆಕ್ಷನ್‍ಗಳ ಅಡಿ ಕ್ರಿಮಿನಲ್ ಅಪರಾರ್ಥಗಳು ಎಂದು ಪರಿಗಣಿಸಲಾಗಿದೆ. ಈ ಅಧಿನಿಯಮವನ್ನು ಉಲ್ಲಂಘಿಸಿವವರ ವಿರುದ್ಧ ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಏಳು ವರ್ಷ ಜೈಲು ಶಿಕ್ಷೆ ಅಥವಾ ದಂಡ ಇಲ್ಲವೆ ಸಜೆ ಮತ್ತು ಜುಲ್ಮಾನೆ ಇವೆರಡನ್ನೂ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ ಎಂದು ಕಾಳಸಂತೆಕೋರರಿಗೆ ಕೇಂದ್ರ ಸರ್ಕಾರ ಸ್ಪಷ್ಟ ಎಚ್ಚರಿಕೆ ನೀಡಿದೆ.

ವಿಪತ್ತು ನಿರ್ವಹಣೆ ಕಾಯ್ದೆ ಅಡಿ ಈ ಸಂಬಂದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವೊಂದನ್ನು ರವಾನಿಸಿರುವ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಗತ್ಯ ಸರಕುಗಳ ಕಾಯ್ದೆಯಲ್ಲಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ನಿರ್ದೇಶಿಸಿದ್ದಾರೆ.

ಆಹಾರ ವಸ್ತುಗಳು, ಔಷಧಿಗಳು ಮತ್ತು ವೈದ್ಯಕೀಯ ಸಾದನ-ಸಲಕರಣೆಗಳನ್ನು ಅಗತ್ಯ ವಸ್ತುಗಳಾಗಿ ಪರಿಗಣಿಸಲಾಗಿದೆ. ಲಾಕ್‍ಡೌನ್ ವೇಳೆ ಇವುಗಳ ಉತ್ಪಾದನೆ, ಅಥವಾ ತಯಾರಿಕೆ, ಸಾಗಣೆ ಮತ್ತು ಪೂರೈಕೆ ಸರಪಳಿಗೆ ಸಂಬಂಧಿಸಿದ ಇತರ ಚಟುವಟಿಕೆಗಳನ್ನು ಕೈಗೊಳ್ಳಲು ಅವಕಾಶವಿದೆ.

ಈ ಪರಿಸ್ಥಿತಿಯಲ್ಲಿ ಅನಧಿಕೃತವಾಗಿ ದಾಸ್ತಾನು ಹೆಚ್ಚಳ/ಅಕ್ರಮ ಸಂಗ್ರಹಣೆ, ಬ್ಲಾಕ್ ಮಾರ್ಕೆಟಿಂಗ್, ಸೋರಿಕೆ ಮತ್ತು ವ್ಯಾಪಾರ ದುರ್ಲಾಭ ಮತ್ತು ಅಗತ್ಯ ವಸ್ತುಗಳ ಧಾರಣೆ ಏರಿಕೆಯಾಗುವ ಸಾದ್ಯತೆಯನ್ನು ನಿರಾಕರಿಸುವಂತಿಲ್ಲ ಎಂದು ಅವರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ದಾಸ್ತಾನು ಮಿತಿಯನ್ನು ನಿಗದಿಗೊಳಿಸಬೇಕು. ದರಗಳನ್ನು ಗೊತ್ತುಪಡಿಸಬೇಕು. ಉತ್ಪಾದನೆ ವೃದ್ಧಿಸಬೇಕು, ವರ್ತಕರು ಮತ್ತು ಡೀಲರ್‍ಗಳ ಲೆಕ್ಕಪತ್ರಗಳನ್ನು ತಪಾಸಣೆ ಮಾಡಬೇಕು ಹಾಗೂ ಇದಕ್ಕೆ ಸಂಬಂಧಪಟ್ಟ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಸೂಚಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ