ಷೇರುಪೇಟೆ ಝಗಮಗ; ಹೊಸ ದಾಖಲೆ ಮಟ್ಟಕ್ಕೆ ಏರಿದ ಸೆನ್ಸೆಕ್ಸ್, ನಿಫ್ಟಿ

ಮುಂಬೈ: ಅಂತಾರಾಷ್ಟ್ರೀಯವಾಗಿ ಪೂರಕ ವಾತಾವರಣ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಉತ್ಸಾಹ ಇನ್ನಷ್ಟು ಹೆಚ್ಚಾಗಿದೆ. ಸೆನ್ಸೆಕ್ಸ್ ಸೂಚ್ಯಂಕ ತನ್ನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ 42 ಸಾವಿರ ಅಂಕಗಳ ಗಡಿ ದಾಟಿ ಹೋಗಿದೆ. ನಿಫ್ಟಿ ಕೂಡ ತನ್ನ ಗರಿಷ್ಠ ಮಟ್ಟಕ್ಕೆ ಹೋದ ಸಾಧನೆ ಮಾಡಿದೆ. ಅಮೆರಿಕ ಮತ್ತು ಚೀನಾ ದೇಶಗಳು ವಿವಿಧ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದ್ದು ಭಾರತದ ಹೂಡಿಕೆದಾರರ ವಿಶ್ವಾಸ ಹೆಚ್ಚಿಸುವಲ್ಲಿ ಸಹಕಾರಿಯಾಗಿರಬಹುದು ಎಂದು ಹೇಳಲಾಗುತ್ತಿದೆ.

ಬಿಎಸ್​ಇ ಸೆನ್ಸೆಕ್ಸ್ ಸೂಚ್ಯಂಕ ಇಂದು ಬೆಳಗಿನ ವಹಿವಾಟಿನಲ್ಲಿ 136 ಅಂಕಗಳಷ್ಟು ಹೆಚ್ಚಳ ಕಂಡು 42,009.94 ಪಾಯಿಂಟ್ ಮಟ್ಟ ತಲುಪಿತು. ಹಾಗೆಯೇ, ಎನ್​ಎಸ್​ಇ ನಿಫ್ಟಿ ಸೂಚ್ಯಂಕ ಕೂಡ ಇವತ್ತಿನ ಬೆಳಗಿನ ವಹಿವಾಟಿನಲ್ಲಿ 12,377.80 ಅಂಕ ಮಟ್ಟದವರೆಗೂ ಹೋಗಿತ್ತು. ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಕೂಡ ತಮ್ಮ ಗರಿಷ್ಠ ಮಟ್ಟ ತಲುಪಿದ್ದು ಇವತ್ತಿನ ವಿಶೇಷ.

ಸನ್ ಫಾರ್ಮಾ, ನೆಸ್ಲೆ ಇಂಡಿಯಾ, ಹಿಂದೂಸ್ತಾನ್ ಯುನಿಲಿವರ್, ಕೋಟಕ್ ಬ್ಯಾಂಕ್, ಅಲ್ಟ್ರಾಟೆಕ್ ಸಿಮೆಂಟ್, ಬಜಾಜ್ ಆಟೋ ಮತ್ತು ಭಾರ್ತಿ ಏರ್​ಟೆಲ್ ಸಂಸ್ಥೆಯ ಷೇರುಗಳು ಹೆಚ್ಚಿನ ಬೆಲೆಗೆ ಮಾರಾಟ ಕಂಡಿವೆ. ಅಂತಾರಾಷ್ಟ್ರೀಯ ಷೇರುಪೇಟೆ ಕೂಡ ಮಿಂಚುತ್ತಿದೆ. ಜಪಾನ್, ದಕ್ಷಿಣ ಕೊರಿಯಾ, ಅಮೆರಿಕದಲ್ಲಿರುವ ಸೂಚ್ಯಂಕಗಳು ಉತ್ತಮ ಮಟ್ಟದಲ್ಲಿ ಏರಿಕೆ ಕಂಡಿವೆ.

ಭಾರತದ ಷೇರುಪೇಟೆಯಷ್ಟೇ ಅಲ್ಲ, ರೂಪಾಯಿ ಮೌಲ್ಯ ಕೂಡ ತುಸು ವೃದ್ಧಿ ಕಂಡಿದೆ. ಡಾಲರ್ ಎದುರು ರೂಪಾಯಿ 5 ಪೈಸೆ ಮೌಲ್ಯ ವೃದ್ಧಿಸಿಕೊಂಡಿದೆ. ಇವತ್ತಿನ ಬೆಳಗಿನ ಅವಧಿಯ ವಹಿವಾಟಿನಲ್ಲಿ ಅಮೆರಿಕನ್ ಡಾಲರ್ ಎದುರು 70.77 ರೂಪಾಯಿ ದರ ಇತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ