ಮಠದ ಮಕ್ಕಳ ಮುಂದೂ ಕೊಳಕು ರಾಜಕೀಯ ಭಾಷಣ ಮಾಡಿದ್ದೇಕೆ?; ಸಿದ್ದರಾಮಯ್ಯ ಟೀಕೆ

ಬೆಂಗಳೂರುಕೇಂದ್ರ ಮತ್ತು ರಾಜ್ಯ ಎರಡೂ ಕಡೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಕರ್ನಾಟಕದ ಭಾಗ್ಯದ ಬಾಗಿಲು ತೆರೆಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಆಶ್ವಾಸನೆ ನೀಡಿದ್ದರು. ಆದರೆ, ಭಾಗ್ಯದ ಬಾಗಿಲ ವಿಷಯ ಬಿಡಿ, ನಮ್ಮ ರಾಜ್ಯದ ಬಿಜೆಪಿ ನಾಯಕರಿಗೆ ಮೋದಿ ಮನೆಯ ಬಾಗಿಲು ಕೂಡ ತೆರೆದಿಲ್ಲ ಎಂಬುದು ಬೇಸರದ ಸಂಗತಿ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿರುವ ಬೆನ್ನಲ್ಲೇ ಸುದ್ದಿಗೋಷ್ಠಿ ಮೂಲಕ ಪ್ರಧಾನಿ ಮೋದಿ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.  ನಿನ್ನೆ ಪ್ರಧಾನಿ ಮೋದಿ ತುಮಕೂರಿನ ಸಿದ್ಧಗಂಗಾ ಮಠದ ವಿದ್ಯಾರ್ಥಿಗಳ ಮುಂದೆ ಯಾವ ರೀತಿಯ ಮಾತನಾಡಬೇಕಿತ್ತು? ಶಾಲಾ ಮಕ್ಕಳ ಎದುರು ಅವರ ಭವಿಷ್ಯದ ಬಗ್ಗೆ ಮಾತನಾಡಬೇಕಿತ್ತು. ಅದರ ಬದಲು ಅಲ್ಲೂ ಹೋಗಿ ರಾಜಕೀಯ ಮಾತನಾಡಿ ಬಂದಿದ್ದಾರೆ. ಅದನ್ನು ಬಿಟ್ಟು ಪೌರತ್ವ, ಎನ್ಆರ್ಸಿ ಬಗ್ಗೆ ಮಾತಾಡಿದರೆ ಹೇಗೆ? ಇದು ಕೊಳಕು ರಾಜಕೀಯ ಭಾಷಣ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ರಾಜ್ಯದಲ್ಲಿ ಹಿಂದೆಂದೂ ಕೇಳರಿಯದ ಭೀಕರ ಪ್ರವಾಹ ರಾಜ್ಯದಲ್ಲಿ ಉಂಟಾಗಿತ್ತು. ಸಂದರ್ಭದಲ್ಲಿ ಪ್ರಧಾನಿ ಮೋದಿ ರಾಜ್ಯಕ್ಕೆ ಬರಲಿಲ್ಲ. ರಾಜ್ಯದ ಜನರು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾರೆ. ನಮ್ಮ ರಾಜ್ಯದ ಜನರು ಬೀದಿ ಪಾಲಾಗಿದ್ದರು.ಆದರೂ ಮೋದಿ ಮಾತಾಡಲಿಲ್ಲ. ಬೇರೆ ಬೇರೆ ವಿಚಾರಗಳಿಗೆ ಟ್ವೀಟ್ ಮಾಡುತ್ತಿರುತ್ತಾರೆ. ಆದರೆ, ಕರ್ನಾಟಕದ ಜನರ ಕಷ್ಟದುಃಖಗಳ ಬಗ್ಗೆ ಒಂದು ಟ್ವೀಟ್ ಕೂಡ ಮಾಡಲಿಲ್ಲ. ಹಿಂದಿನ ಪ್ರಧಾನಿಗಳು ಸಂಕಷ್ಟದಲ್ಲಿದ್ದ ಬೇರೆ ಬೇರೆ ರಾಜ್ಯಗಳಿಗೆ ಭೇಟಿ ನೀಡಿದ್ದಾರೆ. ಹಿಂದೆ ರಾಜ್ಯದಲ್ಲಿ ಪ್ರವಾಹ ಬಂದಾಗ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ರಾಜ್ಯಕ್ಕೆ ಭೇಟಿ ಕೊಟ್ಟಿದ್ದರು ಎಂದು ಹಳೆಯ ದಿನಗಳನ್ನು ಸಿದ್ದರಾಮಯ್ಯ ನೆನಪಿಸಿಕೊಂಡಿದ್ದಾರೆ.

ಮೊದಲು ಪ್ರಧಾನಿ ಮೋದಿ ರಾಜ್ಯಕ್ಕೆ ಬಂದಿದ್ದಾಗ ಏನೆಲ್ಲ ಭರವಸೆಗಳನ್ನು ನೀಡಿದ್ದರು ಎಂಬುದನ್ನು ನೆನಪಿಸಿಕೊಂಡರೆ ಉತ್ತಮ. ನರಸಾಪುರದಲ್ಲಿ ಮಾತನಾಡುವಾಗ 10 ಸಾವಿರ ನೇರ ಉದ್ಯೋಗ, 25 ಸಾವಿರ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಹೇಳಿದ್ದರು. ಭರವಸೆ ಏನಾಯಿತು? 2018ರಲ್ಲಿ ಲಘು ಹೆಲಿಕಾಪ್ಟರ್ ಹಾರಾಟಕ್ಕೆ ಚಾಲನೆ ನೀಡಿದ್ದರು. ಆದರೆ, ಒಂದೂ ಹಾರಾಟ ಮಾಡಲಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ, ರಾಜ್ಯದಲ್ಲೂ ಬಿಜೆಪಿ ಸರ್ಕಾರ ಬಂದರೆ ರಾಜ್ಯದ ಭಾಗ್ಯದ ಬಾಗಿಲು ತೆರೆಯುತ್ತದೆ ಎಂದು ಚುನಾವಣೆ ವೇಳೆ ಮೋದಿ ಹೇಳಿದ್ದರು. ಆದರೆ, ಜನರ ವಿಷಯ ಬದಿಗಿರಲಿ, ನಮ್ಮ ರಾಜ್ಯದ ಸಚಿವರಿಗೇ ಪ್ರಧಾನಿ ಮೋದಿ ಮನೆಯ ಬಾಗಿಲೇ ತೆರೆಯಲಿಲ್ಲ. ಇನ್ನು ಭಾಗ್ಯದ ಬಾಗಿಲು ತೆರೆಯೋದು ಯಾವಾಗ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಲಿ ಅಂತ ಮೋದಿ ಹೇಳಿದ್ದಾರೆ. ಪಾಕಿಸ್ತಾನ ಕೆಟ್ಟ ದೇಶ, ದುಷ್ಟ ರಾಷ್ಟ್ರ ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಆದರೆ, ನೀವು ದೇಶದಲ್ಲಿ ಏನು ಮಾಡುತ್ತಿದ್ದೀರಿ? ಪೌರತ್ವ ಕಾಯ್ದೆ ಜಾರಿ ಮಾಡಿ ಏನು ಮಾಡಲು ಹೊರಟಿದ್ದೀರಿ? ಅದನ್ನು ಮಕ್ಕಳ ಮುಂದೆ ಹೇಳುವ ಅವಶ್ಯಕತೆ ಏನಿತ್ತು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ನರೇಂದ್ರ ಮೋದಿ ಆಡಳಿತದಲ್ಲಿ ದೇಶ ದಿವಾಳಿಯಾಗಲು ಹೊರಟಿದೆ. ಕರ್ನಾಟಕಕ್ಕೆ ಬಂದಾಗಲೆಲ್ಲಾ ಮೋದಿ ಸುಳ್ಳು ಹೇಳುತ್ತಾರೆ. ಆಕಾಶದಲ್ಲಿ ಏನೇನೋ ತೋರಿಸುತ್ತಿದ್ದಾರೆ. ಅದನ್ನು ಜನ ನಂಬಬಾರದು. ದೇಶದಲ್ಲಿ ಜಿಡಿಪಿ ಅತ್ಯಂತ ತಳಮಟ್ಟಕ್ಕೆ ಹೋಗಿದೆ. ಅವರದೇ ಪಕ್ಷದ ನಾಯಕ ಸುಬ್ರಹ್ಮಣ್ಯ ಸ್ವಾಮಿ ಕೂಡ ಜಿಡಿಪಿ ತಳಮಟ್ಟಕ್ಕೆ ಹೋಗಿರುವುದನ್ನು ಒಪ್ಪಿಕೊಂಡಿದ್ದಾರೆ. ರಾಜ್ಯಕ್ಕೆ ಜಿಎಸ್ಟಿ ತೆರಿಗೆ ಹಣ 5,600 ಕೋಟಿ ರೂ. ಬಂದಿಲ್ಲ. ಸ್ವಚ್ಛ ಭಾರತ ಯೋಜನೆಯ ಹಣವೂ ಬರಬೇಕು. ಕುಡಿಯೋ ನೀರಿಗೆ 2,700 ಕೋಟಿ ರೂ. ಬರಬೇಕು. ಹಳ್ಳಿಗರ ಕೊಳ್ಳುವ ಶಕ್ತಿ ಶೇ. 8.8ರಷ್ಟು ಕಡಿಮೆಯಾಗಿದೆ. ಹೂಡಿಕೆ ಇಲ್ಲದಿದ್ದರೆ ಉದ್ಯೋಗ ಸೃಷ್ಟಿಯಾಗುವುದಿಲ್ಲ. ಬ್ಯಾಂಕ್ಗಳು ದಿವಾಳಿಯಾಗಿ ಹೋಗಿವೆ. ಇದು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅರ್ಥವಾಗಿದೆಯೋ ಇಲ್ಲವೋ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕರ್ನಾಟಕ ದಿವಾಳಿಯಾಗಿದೆ ಎಂದು ನಾನು ಹೇಳಿದರೆ ಬಿಜೆಪಿಯವರು ಮೈ ಪರಚಿಕೊಳ್ಳುತ್ತಾರೆ. ಇದ್ದದ್ದು ಇದ್ದಂಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ ಎಂಬಂತಾಗಿದೆ ಬಿಜೆಪಿಯವರ ಸ್ಥಿತಿ. ಅಶ್ವತ್ಥನಾರಾಯಣ, ಅಶೋಕ, ರೇಣುಕಾಚಾರ್ಯ ಸೇರಿ ಸಾಕಷ್ಟು ಆರ್ಥಿಕತೆ ಬಗ್ಗೆ ಮಾತಾಡಿದ್ದಾರೆ. ಪಾಪ ರೇಣುಕಾಚಾರ್ಯಗೆ ಹಣಕಾಸು, ಆರ್ಥಿಕತೆ ಬಗ್ಗೆ ಏನು ಎಂದು ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ