ಗಣರಾಜ್ಯೋತ್ಸವ ದಿನಾಚರಣೆ ಮೆರವಣಿಗೆಗೆ ಪಶ್ಚಿಮ ಬಂಗಾಳದ ಸ್ತಬ್ಧಚಿತ್ರವನ್ನು ನಿರಾಕರಿಸಿದ ಕೇಂದ್ರ

ನವದೆಹಲಿ/ಕೋಲ್ಕತ್ತಾ, ಜ.2- ಪೌರತ್ವ ನೋಂದಣಿ ಕಾಯ್ದೆ ವಿಷಯದಲ್ಲಿ ಕೇಂದ್ರ ಸರ್ಕಾರ ಮತ್ತು ಪಶ್ಚಿಮ ಬಂಗಾಳದ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿರುವಾಗಲೇ ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತಹ ಮತ್ತೊಂದು ಬೆಳವಣಿಗೆ ಕಂಡುಬಂದಿದೆ.

ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ದಿನಾಚರಣೆ ಮೆರವಣಿಗೆಗೆ ಪಶ್ಚಿಮ ಬಂಗಾಳದ ಸ್ತಬ್ಧಚಿತ್ರವನ್ನು ನಿರಾಕರಿಸಿರುವುದರಿಂದ ಕೇಂದ್ರ ಮತ್ತು ರಾಜ್ಯದ ನಡುವೆ ತೀವ್ರ ಭಿನ್ನಾಭಿಪ್ರಾಯ ತಲೆದೋರಿದೆ. ರಕ್ಷಣಾ ಸಚಿವಾಲಯ ಪಶ್ಚಿಮ ಬಂಗಾಳದ ಸ್ತಬ್ಧಚಿತ್ರ ಪ್ರಸ್ತಾವನೆಯನ್ನು ತಳ್ಳಿಹಾಕಿದೆ.

ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡಲು ರಚಿತವಾಗಿರುವ ಸಮಿತಿ ಎರಡು ಸುತ್ತುಗಳ ಸಭೆ ನಡೆಸಿದೆ. 16 ರಾಜ್ಯಗಳು ಮತ್ತು 6 ಸಚಿವಾಲಯಗಳು, ಇಲಾಖೆಗಳ ಸ್ತಬ್ಧಚಿತ್ರಗಳನ್ನು ಈಗ ಅಂತಿಮಗೊಳಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಸ್ತಬ್ಧಚಿತ್ರದ ಧ್ಯೇಯ, ಪರಿಕಲ್ಪನೆ, ವಿನ್ಯಾಸ ಮತ್ತು ದೃಶ್ಯ ಪರಿಣಾಮಗಳನ್ನು ಆಧರಿಸಿ ಅವುಗಳನ್ನು ಆಯ್ಕೆ ಮಾಡಲಾಗುತ್ತದೆ. ಈಗಾಗಲೇ 56 ಸ್ತಬ್ಧಚಿತ್ರಗಳನ್ನು ಶಾರ್ಟ್‍ಲಿಸ್ಟ್ ಮಾಡಲಾಗಿದೆ. ಇದರಲ್ಲಿ ವಿವಿಧ ರಾಜ್ಯಗಳ 32 ಮತ್ತು ಸಚಿವಾಲಯ/ಇಲಾಖೆಗಳ 24 ಸ್ತಬ್ಧಚಿತ್ರಗಳು ಪಟ್ಟಿಯಲ್ಲಿವೆ.

ಗಣರಾಜ್ಯೋತ್ಸವ ದಿನದ ಮೆರವಣಿಗೆಯ ಸಮಯಕ್ಕೆ ಕಾಲಾವಕಾಶದ ಮಿತಿ ಇರುವುದರಿಂದ ಬಹುಮುಖ್ಯವಾದ ಸ್ತಬ್ಧಚಿತ್ರಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿಕೆ ನೀಡುವ ಮೂಲಕ ಪಶ್ಚಿಮ ಬಂಗಾಳದ ಸ್ತಬ್ಧಚಿತ್ರ ಪ್ರಸ್ತಾವನೆಯನ್ನು ತಳ್ಳಿಹಾಕಲಾಗಿದೆ.

ಆದರೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರ ಕೇಂದ್ರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಉದ್ದೇಶಿತ ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧ ಪಶ್ಚಿಮ ಬಂಗಾಳ ಧ್ವನಿ ಎತ್ತಿರುವುದರಿಂದ ದ್ವೇಷ ಮತ್ತು ವೈಷಮ್ಯದಿಂದ ಈ ತಾರತಮ್ಯ ಮಾಡಲಾಗಿದೆ ಎಂದು ಟಿಎಂಸಿ ಸಂಸದ ಸೌಗತ್ ರಾಯ್ ಆರೋಪಿಸಿದ್ದಾರೆ.

ಕಲೆ, ಸಂಸ್ಕøತಿ, ಪರಂಪರೆ ಮೊದಲಾದ ವಿಷಯಗಳಲ್ಲಿ ಪಶ್ಚಿಮ ಬಂಗಾಳ ಮುಂಚೂಣಿಯಲ್ಲಿದೆ. ನಾವು ಅತ್ಯುತ್ತಮ ಸ್ತಬ್ಧಚಿತ್ರದ ಪ್ರಸ್ತಾವನೆಗಳನ್ನು ಕೇಂದ್ರಕ್ಕೆ ಸಲ್ಲಿಸಿದರೂ ಪೌರತ್ವ ಕಾಯ್ದೆ ಪ್ರತಿಭಟನೆ ಹಿನ್ನೆಲೆಯಲ್ಲಿ ನಮ್ಮ ಕೋರಿಕೆಯನ್ನು ನಿರಾಕರಿಸಲಾಗಿದೆ. ಇದರ ವಿರುದ್ಧ ಪ್ರತಿಭಟನೆ ಮಾಡುವುದಾಗಿ ರಾಯ್ ಎಚ್ಚರಿಕೆ ನೀಡಿದ್ದಾರೆ.

ಅನೇಕ ವಿಷಯಗಳಲ್ಲಿ ಕೇಂದ್ರ ಸರ್ಕಾರ ಮತ್ತು ಪಶ್ಚಿಮ ಬಂಗಾಳ ನಡುವೆ ಭಿನ್ನಾಭಿಪ್ರಾಯಗಳು ಭುಗಿಲೆದ್ದಿರುವ ಸಂದರ್ಭದಲ್ಲೇ ಈಗ ಸ್ತಬ್ಧಚಿತ್ರ ವಿವಾದ ಮತ್ತೊಂದು ವಿವಾದವಾಗಿ ಪರಿಣಮಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ