ಬೆಂಗಳೂರು, ಡಿ.12-ನಗರದ ಸಾರ್ವಜನಿಕರಿಗೆ ಸರ್ಕಾರ ಶಾಕ್ ನೀಡಿದೆ. ಇನ್ನು ಮುಂದೆ ಹೊಸ ಕಾರು ಖರೀದಿಸಬೇಕಾದರೆ ನಿಲುಗಡೆಯ ಸ್ಥಳ ಇರುವ ಬಗ್ಗೆ ದೃಢೀಕರಣ ಪತ್ರ ನೀಡಬೇಕು. ಈಗಾಗಲೇ ಕಾರು ಹೊಂದಿರುವವರು ಎರಡು ವರ್ಷಗಳ ಒಳಗೆ ನಿಲುಗಡೆ ಸ್ಥಳ ಹೊಂದಿಸಿಕೊಳ್ಳಬೇಕು.
ಈ ರೀತಿಯ ವಿವಾದಿತ ನಿಯಮಗಳನ್ನು ಜಾರಿಗೆ ತರಲು ಸಾರಿಗೆ ಇಲಾಖೆ ಮುಂದಾಗಿದೆ.
ಈ ಮೊದಲು ಸಾರಿಗೆ ಸಚಿವರಾಗಿದ್ದ ಡಿ.ಸಿ.ತಮ್ಮಣ್ಣ ಅವರು 2018ರ ಜೂನ್ ತಿಂಗಳಿನಲ್ಲೇ ಈ ರೀತಿಯ ಚರ್ಚೆಯನ್ನು ಹುಟ್ಟುಹಾಕಿದ್ದರು. ಒಂದಷ್ಟು ದಿನ ಇದು ಚರ್ಚೆಯಾಗದೆ ಶೈತ್ಯಾಗಾರ ಸೇರಿತ್ತು. ಈಗ ಹೊಸ ಸರ್ಕಾರದಲ್ಲಿ ಮತ್ತೆ ಭುಗಿಲೆದ್ದಿದೆ.
ಸಾರಿಗೆ ಇಲಾಖೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ವಾಹನ ಪ್ರಿಯರಿಗೆ ಭಾರೀ ಶಾಕ್ ಕಾದಿದೆ. 2020ರ ನಂತರ ನೀವು ವಾಹನ ಖರೀದಿಸಿ ನೋಂದಣಿ ಮಾಡಿಕೊಳ್ಳಬೇಕಾದರೆ ನಿಲುಗಡೆಯ ಜಾಗ ಇರುವ ಬಗ್ಗೆ ದೃಢೀಕರಣ ಸಲ್ಲಿಸಬೇಕು. ಬಿಬಿಎಂಪಿಯವರು ಸ್ಥಳ ಹಾಗೂ ದಾಖಲಾತಿಗಳನ್ನು ಪರಿಶೀಲಿಸಿ ನಿರಪೇಕ್ಷಣಾ (ಎನ್‍ಒಸಿ) ಪತ್ರ ನೀಡಿದ ಬಳಿಕವಷ್ಟೆ ಹೊಸ ವಾಹನ ನೋಂದಣಿಯಾಗಲಿದೆ ಎಂದು ನಿಯಮ ರೂಪಿಸಲಾಗುವುದು ಎಂದು ಸಾರಿಗೆ ಇಲಾಖೆ ಆಯುಕ್ತ ಎನ್.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಸಂಚಾರ ದಟ್ಟಣೆಯೂ ವಿಪರೀತವಾಗುತ್ತಿದೆ. ಪಾರ್ಕಿಂಗ್ ಸ್ಥಳ ಇಲ್ಲದೆ ಇರುವುದರಿಂದ ರಸ್ತೆಯಲ್ಲಿ, ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕಲು ನಿಯಮಾವಳಿಗಳನ್ನು ಪರಿಷ್ಕರಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಹೊಸ ನಿಯಮಾವಳಿ ಜಾರಿಗೆ ಬಂದರೆ ಪರಿಸರ ಮಾಲಿನ್ಯ ನಿಯಂತ್ರಣಗೊಳ್ಳುತ್ತದೆ. ಸಾಮೂಹಿಕ ಸಾರಿಗೆ ಬಳಕೆ ಹೆಚ್ಚಾಗುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ ಬೆಂಬಲ:
ಸಾರಿಗೆ ಇಲಾಖೆಯ ಪ್ರಸ್ತಾವಿತ ತಿದ್ದುಪಡಿಗೆ ಬಿಬಿಎಂಪಿ ಬೆಂಬಲ ವ್ಯಕ್ತಪಡಿಸಿದೆ. ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್ ಪ್ರತಿಕ್ರಿಯಿಸಿ, ಇದು ಸ್ವಾಗತಾರ್ಹವಾದ ಹೆಜ್ಜೆ. ಕೆಲವರು ತಮ್ಮ ಐಷಾರಾಮಿ ಜೀವನ ತೋರಿಸಿಕೊಳ್ಳಲು ಅಗತ್ಯವಿಲ್ಲದಿದ್ದರೂ ನಾಲ್ಕೈದು ಕಾರುಗಳನ್ನು ಖರೀದಿಸಿ ರಸ್ತೆಗಳಲ್ಲಿ ನಿಲ್ಲಿಸುತ್ತಾರೆ. ಇದರಿಂದ ಸಂಚಾರ ವ್ಯವಸ್ಥೆಯೂ ಹಾಳಾಗುತ್ತಿದೆ. ಸಾರಿಗೆ ಇಲಾಖೆ ರೂಪಿಸುತ್ತಿರುವ ನಿಯಮಾವಳಿಗಳಿಗೆ ಬಿಬಿಎಂಪಿ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಹೇಳಿದ್ದಾರೆ.
ನಿಲುಗಡೆ ಜಾಗ ಇರುವುದನ್ನು ದೃಢೀಕರಿಸುವ ಸಲುವಾಗಿ ಯಾವ ರೀತಿ ಕೆಲಸ ಮಾಡಬೇಕು ಎಂದು ಬಿಬಿಎಂಪಿ ಆಯುಕ್ತರು ಮತ್ತು ಅಧಿಕಾರಿಗಳ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಜನಾಕ್ರೋಶ: ಸಾರಿಗೆ ಇಲಾಖೆಯ ಈ ನಿರ್ಧಾರ ಜನಸಾಮಾನ್ಯರನ್ನು ಕೆರಳಿಸಿದೆ. ಬೆಂಗಳೂರಿನಲ್ಲಿ ರಸ್ತೆಗಳು ಸರಿಯಿಲ್ಲ, ಸಮರ್ಪಕವಾದ ಸಾರಿಗೆ ವ್ಯವಸ್ಥೆ ಇಲ್ಲ. ಪ್ರತಿ ಕುಟುಂಬವೂ ಸ್ವಂತ ವಾಹನ ಹೊಂದುವುದು ಅನಿವಾರ್ಯ ಎಂಬ ಪರಿಸ್ಥಿತಿ ಇದೆ.
ಮೂಲಸೌಲಭ್ಯಗಳತ್ತ ಗಮನಹರಿಸಬೇಕಾದ ಸರ್ಕಾರಗಳು ಅನಗತ್ಯವಾದ ನಿಯಮಾವಳಿಗಳನ್ನು ರೂಪಿಸಿ ಸಾರ್ವಜನಿಕರನ್ನು ಬೆದರಿಸುವ ಪ್ರಯತ್ನ ಮಾಡುತ್ತಿದೆ ಎಂಬ ಆಕ್ರೋಶ ಕೇಳಿ ಬಂದಿದೆ.
ಈ ಹಿಂದೆ ಸಾರಿಗೆ ಸಚಿವರಾಗಿದ್ದ ಡಿ.ಸಿ.ತಮ್ಮಣ್ಣ ಅವರು ವಿಷಯ ಪ್ರಸ್ತಾಪಿಸಿದಾಗಲೇ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆಗ ಸುಮ್ಮನಾಗಿದ್ದ ಸರ್ಕಾರ, ಈಗ ಮತ್ತೆ ಜನರನ್ನು ಬ್ಲಾಕ್‍ಮೇಲ್ ಮಾಡಲು ಮುಂದಾಗಿದೆ. ಈಗಾಗಲೇ ಕಾರು ಖರೀದಿಸಿರುವವರು ಕೂಡ ಪಾರ್ಕಿಂಗ್ ಜಾಗ ಹೊಂದಿಸಿಕೊಳ್ಳಬೇಕು ಎಂಬ ನಿಯಮ ರೂಪಿಸಲು ಹೊರಟಿರುವುದು ಖಂಡನೀಯ. ವಾಹನ ಮಾಲೀಕರು ಹೇಗೋ ಹೊಂದಾಣಿಕೆ ಮಾಡಿಕೊಂಡು ನಿಲುಗಡೆ ಮಾಡಿಕೊಂಡಿರುತ್ತಾರೆ. ಅನಪೇಕ್ಷಿತ ಈ ನಿಯಮದಿಂದ ಭ್ರಷ್ಟಾಚಾರ ಹೆಚ್ಚಾಗಲು ಮತ್ತು ಅಧಿಕಾರಿಗಳು ಜನರನ್ನು ಬ್ಲಾಕ್ ಮೇಲ್ ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂಬ ಆರೋಪಗಳು ಕೇಳಿಬಂದಿವೆ.