![mallikarjun-kharge](https://kannada.vartamitra.com/wp-content/uploads/2019/12/mallikarjun-kharge-572x381.jpg)
ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರದಿಂದ ಅಧಿಕಾರ ದುರುಪಯೋಗವಾಗುತ್ತಿದೆ. ಪ್ರತೀ ಚುನಾವಣೆಯಲ್ಲೂ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಆತಂಕ ವ್ಯಕ್ತಪಡಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯ ನಡೆಗಳಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆ ಆಗುತ್ತಿದೆ ಎಂದು ಆರೋಪಿಸಿದರು.
ಪ್ರತೀ ಚುನಾವಣೆಯಲ್ಲೂ ಎದುರಾಳಿ ಅಭ್ಯರ್ಥಿಗಳನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ವಿಪಕ್ಷ ನಾಯಕರಿಗೆ ಭಯ ಹುಟ್ಟಿಸಿ ಅವರ ಧ್ವನಿ ಅಡಗಿಸುವ ಅಥವಾ ಪಕ್ಷಕ್ಕೆ ಸೆಳೆಯುವ ಕೆಲಸವನ್ನು ಮಾಡುತ್ತಿದ್ಧಾರೆ. ಹಣದ ಬಲದ ಮೇಲೆ ಚುನಾವಣೆ ಗೆಲ್ಲಲು ಯತ್ನಿಸುತ್ತಿದ್ಧಾರೆ. ಹಣದ ಬಲ ಕೆಲಸ ಮಾಡದಿದ್ದರೆ ಧರ್ಮ, ಜಾತಿ ಹೆಸರಿನಲ್ಲಿ ಭಾವಾನಾತ್ಮಕವಾಗಿ ಮಾತನಾಡಿ ಮತ ಪಡೆಯಲು ಯತ್ನಿಸುತ್ತಿದ್ಧಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ರಾಜ್ಯ ಉಪಚುನಾವಣೆಯಲ್ಲಿ ಬಿಜೆಪಿ ಎಲ್ಲಾ ಕ್ಷೇತ್ರಗಳಲ್ಲೂ ಸೋಲುಂಟಾಗುತ್ತದೆ ಎಂದು ಖರ್ಗೆ ಈ ವೇಳೆ ಭವಿಷ್ಯ ನುಡಿದರು. ಮಹಾರಾಷ್ಟ್ರದಲ್ಲಿ ಎನ್ಸಿಪಿ ಮತ್ತು ಕಾಂಗ್ರೆಸ್ನಿಂದ ಬಿಜೆಪಿಗೆ ಪಕ್ಷಾಂತರವಾಗಿದ್ದ ಶೇ. 70ರಷ್ಟು ಅಭ್ಯರ್ಥಿಗಳು ಚುನಾವಣೆಯಲ್ಲಿ ಸೋತಿದ್ಧಾರೆ. ಅದೇ ರೀತಿ ಕರ್ನಾಟಕದಲ್ಲೂ ಅನರ್ಹ ಶಾಸಕರು ಸೋಲನುಭವಿಸುತ್ತಾರೆ. ಜನರು ಪಕ್ಷಾಂತರಿಗಳನ್ನ ತಿರಸ್ಕರಿಸುತ್ತಾರೆ. ರಾಜ್ಯದ 15 ಕ್ಷೇತ್ರಗಳ ಮತದಾರರು ನೀಡುವ ಆದೇಶ ದೇಶದ ಇತರ ರಾಜ್ಯಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟರು.
ಉಪಚುನಾವಣೆಯಲ್ಲಿ ಬಿಜೆಪಿಗೆ ಅಗತ್ಯ ಸಂಖ್ಯೆಯಷ್ಟು ಕ್ಷೇತ್ರಗಳನ್ನ ಗೆಲ್ಲಲು ಸಾಧ್ಯವಾಗದಿದ್ದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಮತ್ತೆ ಒಂದಾಗಿ ಸರ್ಕಾರ ರಚಿಸುತ್ತವಾ ಎಂಬ ಪತ್ರಕರ್ತರ ಪ್ರಶ್ನೆಗೆ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟ ಉತ್ತರ ಕೊಡಲಿಲ್ಲ.
ದೇಶದಲ್ಲಿ ಈಗ ಬಿಜೆಪಿ ವಿರುದ್ಧ ಒಂದಾಗಿ ಕೆಲಸ ಮಾಡಲು ಹಲವರು ಸಿದ್ಧರಿದ್ದಾರೆ. ಹೀಗಾಗಿ, ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳು ಸೇರಿ ಸರ್ಕಾರ ರಚನೆ ಮಾಡಿದೆವು. ಕರ್ನಾಟಕದಲ್ಲಿ ಮೊದಲು 15 ಸ್ಥಾನಗಳನ್ನು ಗೆಲ್ಲೋಣ. ಆ ಬಳಿಕ ಮುಂದೇನು ಮಾಡಬೇಕೆಂದು ಯೋಚಿಸೋಣ. ಕಾಂಗ್ರೆಸ್ ನಾಯಕರು ಮತ್ತು ಹೈಕಮಾಂಡ್ನವರು ಮುಂದಿನ ದಾರಿ ನಿರ್ಧರಿಸುತ್ತಾರೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.