ಹಣ ಖರ್ಚು ಮಾಡೋದ್ರಲ್ಲಿ ಬಿಜೆಪಿಯವರ ಜತೆ ಸ್ಪರ್ಧೆ ಅಸಾಧ್ಯ; ಸಿದ್ದರಾಮಯ್ಯ

ರಾಣೆಬೆನ್ನೂರುಕರ್ನಾಟಕ ಉಪಚುನಾವಣೆಯಲ್ಲಿ ರಾಜಕೀಯ ನಾಯಕರು ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿದ್ದಾರೆ. ಬಿಜೆಪಿ, ಕಾಂಗ್ರೆಸ್​​ ಹಾಗೂ ಜೆಡಿಎಸ್​ ಪ್ರತ್ಯೇಕವಾಗಿ ಸ್ಪರ್ಧೆಗೆ ಇಳಿದಿದ್ದು, ಭಾರೀ ಕುತೂಹಲ ಮೂಡಿಸಿದೆ. ಉಪಚುನಾವಣೆಯಲ್ಲಿ ಬಿಜೆಪಿಯವರು ತುಂಬಾನೇ ಹಣ ಖರ್ಚು ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಸಿದ್ದರಾಮಯ್ಯ ರಾಣೆಬೆನ್ನೂರಿನಲ್ಲಿ ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. ಇಂದು ಕುಮಾರಪಟ್ಟಣಂ ಗೆಸ್ಟ್ ಹೌಸ್​​ನಲ್ಲಿ ಮಾಧ್ಯಮಗಳಿಗೆ ಅವರು ಹೇಳಿಕೆ ನೀಡಿದರು. “ಬಿಜೆಪಿಯವರು ತುಂಬಾನೇ ದುಡ್ಡು ಖರ್ಚು ಮಾಡುತ್ತಿದ್ದಾರೆ. ಹಣ ಖರ್ಚು ಮಾಡುವುದರಲ್ಲಿ ಅವರ ಜೊತೆ ಕಾಂಪಿಟೇಷನ್ ಮಾಡಲು ಆಗುವುದಿಲ್ಲ,” ಎಂದು ಮುಖ್ಯಮಂತ್ರಿ ಬಿಎಸ್​ವೈ ಕಾಲೆಳೆದರು.

ಅನರ್ಹರು ಗೆದ್ದರೆ ಅವರನ್ನು ಮಂತ್ರಿ ಮಾಡುವುದಾಗಿ ಬಿಎಸ್​​ವೈ ಹೇಳಿದ್ದರು. ಈ ವಿಚಾರವಾಗಿ ಕಾಂಗ್ರೆಸ್​ ಚುನಾವಣಾ ಆಯೋಗದ ಮೆಟ್ಟಿಲೇರಿತ್ತು. ಈ ಬಗ್ಗೆ ಮಾತನಾಡಿರುವ ಸಿದ್ದರಾಮಯ್ಯ “ಬಿಎಸ್​ವೈ ಹೋದಲ್ಲಿ ಬಂದಲ್ಲಿ ಅನರ್ಹರನ್ನು ಮಂತ್ರಿ ಮಾಡುವುದಾಗಿ ಹೇಳುತ್ತಿದ್ದಾರೆ. ಹೋದಲ್ಲಿ ಬಂದಲ್ಲಿ ಲಿಂಗಾಯತರು ನಂಗೆ ವೋಟ್​ ಮಾಡಿ ಎಂದು ಕೇಳುತ್ತಿದ್ದಾರೆ. ಇದು ನೀತಿ ಸಂಹಿತೆಯ ಉಲ್ಲಂಘನೆ,” ಎಂದು ಆರೋಪಿಸಿದರು.

ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚಿಸಲು ಮುಂದಾಗಿ ವಿಫಲವಾಗಿರುವ ಬಗ್ಗೆ ಮಾತನಾಡಿರುವ ಸಿದ್ದರಾಮಯ್ಯ, “ಮಹಾರಾಷ್ಟ್ರದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಅಲ್ಲಿ, ಸಂವಿಧಾನದ ಉಲ್ಲಂಘನೆಯಾಗಿದೆ. ಇದರಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪವಿದೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸಂವಿಧಾನದ ಕಗ್ಗೊಲೆ ಮಾಡಿದ್ದಾರೆ. ಚುನಾವಣಾ ಆಯೋಗ ಕೇಂದ್ರದ ಕೈಗೊಂಬೆಯಾಗಿದೆ,” ಎಂದು ಕಿಡಿಕಾರಿದರು.

ಬಿಜೆಪಿ ಮತ್ತು ಜೆಡಿಎಸ್​ಗೆ ನನ್ನ ಕಂಡ್ರೆ ಹೆದರಿಕೆ:
ಜೆಡಿಎಸ್​ ಹಾಗೂ ಬಿಜೆಪಿ ನಾಯಕರು ಸಿದ್ದರಾಮಯ್ಯನನ್ನು ಕಂಡು ಹೆದರಿದ್ದಾರಂತೆ. “ಎರಡೂ ಪಕ್ಷದವರು ನನ್ನನ್ನು ಕಂಡು ಹೆದರಿದ್ದಾರೆ. ಹೀಗಾಗಿ ನನ್ನನ್ನೇ ಟಾರ್ಗೆಟ್​ ಮಾಡಲಾಗುತ್ತಿದೆ. ನಾವು 12 ಸ್ಥಾನ ಗೆಲ್ಲುತ್ತೇವೆ. ಯಡಿಯೂರಪ್ಪನ ಸರ್ಕಾರ ಬಿದ್ದುಹೋಗುತ್ತದೆ,” ಎಂದು ಅವರು ಭವಿಷ್ಯ ನುಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ