ವಾಸ್ತುಶಿಲ್ಪಿ ಚಂದ್ರಕಾಂತ್ ಸೋಮಪುರ ವಿನ್ಯಾಸದಂತೆ ರಾಮಮಂದಿರ ನಿರ್ಮಿಸಬೇಕು: ಕೇಂದ್ರ ಸರ್ಕಾರಕ್ಕೆ ವಿಹೆಚ್ ಪಿ ಒತ್ತಾಯ

ನವದೆಹಲಿ:  ಸುಪ್ರೀಂಕೋರ್ಟ್ ತೀರ್ಪಿನಂತೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ  ಕೇಂದ್ರ ಸರ್ಕಾರ ಕ್ಷಿಪ್ರಗತಿಯಲ್ಲಿ ಮುಂದಾಗಬೇಕು ಹಾಗೂ  ಖ್ಯಾತ ವಾಸ್ತುಶಿಲ್ಪಿ ಚಂದ್ರಕಾಂತ್ ಸೋಮಪುರ ಅವರ ವಿನ್ಯಾಸದಂತೆ ದೇವಾಲಯವನ್ನು ನಿರ್ಮಿಸಬೇಕೆಂಬ ಬೇಡಿಕೆಯನ್ನು ವಿಶ್ವ ಹಿಂದೂ ಪರಿಷತ್ ಮುಂದಿಟ್ಟಿದೆ.

1989ರಲ್ಲಿ ವಿಶ್ವ ಹಿಂದೂ ಪರಿಷತ್ ಮುಖ್ಯಸ್ಥ ಅಶೋಕ್ ಸಿಂಘಾಲ್ ಅವರನ್ನು 1989ರಲ್ಲಿಯೇ ದೇವಾಲಯ ವಿನ್ಯಾಸವನ್ನು ಸಿದ್ದಪಡಿಸಿಕೊಳ್ಳುವಂತೆ ಚಂದ್ರಕಾಂತ್ ಸೋಮಪುರ ಅವರನ್ನು ಕೇಳಿಕೊಂಡಿತ್ತು. ನಂತರ ದೇಶಾದ್ಯಂತ ಭಕ್ತಾಧಿಗಳಲ್ಲಿಯೂ ಇದನ್ನು ಹರಡಿಸಲಾಗಿತ್ತು ಎಂದು ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಚಂದ್ರಕಾಂತ್ ಸೋಮಪುರ ಅವರ ವಿನ್ಯಾಸದಂತೆಯೇ ನೂತನ ರಾಮ ಮಂದಿರ ನಿರ್ಮಾಣವಾಬೇಕೆಂದು ನಿರೀಕ್ಷಿಸಲಾಗಿದೆ ಎಂದು ಕುಮಾರ್ ಹೇಳಿದ್ದಾರೆ.

ದೇವಾಲಯಕ್ಕೆ ಕಲ್ಲುಗಳನ್ನು ಕೊರೆಯುವುದು ಹಾಗೂ ಕಂಬಗಳನ್ನು ನಿಲ್ಲಿಸುವ ಕೆಲಸ ಪ್ರಗತಿಯಲ್ಲಿದ್ದು, ಕಟ್ಟಡ ನಿರ್ಮಾಣಕ್ಕೆ ಇದನ್ನು ಬಳಸಿಕೊಳ್ಳಬೇಕು, ದೇವಾಲಯ ನಿರ್ಮಾಣ ಕಾರ್ಯವನ್ನು ಕ್ಷಿಪ್ರಗತಿಯಲ್ಲಿ ಕೈಗೆತ್ತಿಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ನಿನ್ನೆ ನಡೆದ ವಿಶೇಷ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪರಿಷತ್ತಿನ ಪದಾಧಿಕಾರಿಗಳು ತಿಳಿಸಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪು ಅನುಷ್ಟಾನ ಸಂಬಂಧ ಕೇಂದ್ರ ಸರ್ಕಾರ ಹಾಗೂ ಉತ್ತರ ಪ್ರದೇಶ ಸರ್ಕಾರ ಪ್ರಾಮಾಣಿಕ ರೀತಿಯಲ್ಲಿ ಕರ್ತವ್ಯ ನಿರ್ವಹಿಸಲಿವೆ ಎಂಬ ಭರವಸೆ ಹೊಂದಿರುವುದಾಗಿ ವಿಹೆಚ್ ಪಿ ವಕ್ತಾರ ವಿನೋದ್ ಬನ್ಸಾಲ್ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ