ಕರ್ನಾಟಕ, ಮಹಾರಾಷ್ಟ್ರದಲ್ಲಿ ಜೆಯುಎಂ ಭಯೋತ್ಪಾದಕ ಸಂಘಟನೆ ಸಕ್ರಿಯ!

ನವದೆಹಲಿ: ಬಾಂಗ್ಲಾದೇಶಿ ಭಯೋತ್ಪಾದಕ ಸಂಘಟನೆ ಜಮಾತ್ ಉಲ್ ಮುಜಾಹಿದೀನ್ (ಜೆಯುಎಂ) ಕರ್ನಾಟಕ, ಬಿಹಾರ, ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಸಕ್ರಿಯವಾಗಿರುವುದಾಗಿ ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್ ಐಎ) ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದೆ.

ಸೋಮವಾರ ಎಲ್ಲಾ ರಾಜ್ಯಗಳ ಭಯೋತ್ಪಾದಕ ನಿಗ್ರಹ ದಳ ಮತ್ತು ಸ್ಪೆಷಲ್ ಟಾಸ್ಕ್ ಫೋರ್ಸ್ಸ್ (ಎಸ್ ಟಿಎಫ್)ನ ಮುಖ್ಯಸ್ಥರ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಎನ್ ಐಎ ಡೈರೆಕ್ಟರ್ ಜನರಲ್ ಯೋಗೇಶ್ ಚಂದರ್ ಮೋದಿ, ಬಾಂಗ್ಲಾದೇಶಿ ವಲಸಿಗರ ಹೆಸರಿನಲ್ಲಿ ಜಮಾತ್ ಉಲ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆ ಸಕ್ರಿಯವಾಗಿರುವುದಾಗಿ ತಿಳಿಸಿದರು.

1984ರ ಅಸ್ಸಾಂ-ಮೇಘಾಲಯ ಕೇಡರ್ ನ ಐಪಿಎಸ್ ಅಧಿಕಾರಿ ವೈಸಿ ಮೋದಿ, ಜೆಯುಎಂನ ಮೋಸ್ಟ್ ವಾಂಟೆಡ್ 25 ಉಗ್ರರ ಪಟ್ಟಿಯನ್ನು ಈ ಸಂದರ್ಭದಲ್ಲಿ ಘೋಷಿಸಿದ್ದು, ಉಗ್ರರ ಜಾಡನ್ನು ಪತ್ತೆ ಹಚ್ಚುವಂತೆ ಕರ್ನಾಟಕ, ಕೇರಳ, ಮಹಾರಾಷ್ಟ್ರ ಹಾಗೂ ಬಿಹಾರ ರಾಜ್ಯದ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿ ತಿಳಿಸಿದೆ.

ದಾಳಿ ನಡೆಸಲು ಹೊಂಚು ಹಾಕುತ್ತಿರುವ ಇಂತಹ ಭಯೋತ್ಪಾದಕ ಸಂಘಟನೆಯನ್ನು ಮಟ್ಟಹಾಕಲು ನಾವು ಪೂರ್ಣ ಪ್ರಮಾಣದಲ್ಲಿ ಸಜ್ಜಾಗಬೇಕಾಗಿದೆ. ಅಲ್ಲದೇ ಎಲ್ಲಾ ರಾಜ್ಯಗಳ ನೆರವಿನೊಂದಿಗೆ ಉಗ್ರರ ಜಾಡನ್ನು ಪತ್ತೆ ಹಚ್ಚಬೇಕೆಂದು ಈ ಸಂದರ್ಭದಲ್ಲಿ ಹೇಳಿದರು.

ಭಯೋತ್ಪಾದಕ ಕೃತ್ಯವನ್ನು ಮಟ್ಟಹಾಕಲು ಕೇಂದ್ರದ ರಾಷ್ಟ್ರೀಯ ತನಿಖಾ ಸಂಸ್ಥೆ, ಇನ್ನಿತರ ಏಜೆನ್ಸಿ ಹಾಗೂ ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಗಳ ಸಹಕಾರದೊಂದಿಗೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ