ವೇತನ ಪರಿಷ್ಕರಣೆಗೆ ಒತ್ತಾಯಿಸಿ ಹೆಚ್​ಎಎಲ್​ ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ

ಬೆಂಗಳೂರು; ವೇತನ ಪರಿಷ್ಕರಣೆ ಮತ್ತು ಇತರ ಅನೇಕ ಬೇಡಿಕೆಗಳಿಗೆ ಒತ್ತಾಯಿಸಿ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್ಎಎಲ್) 20,000ಕ್ಕೂ ಹೆಚ್ಚು ನೌಕರರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಹೆಚ್ಎಎಲ್ ಎಲ್ಲಾ 9 ಕಾರ್ಮಿಕ ಸಂಘಗಳ ಪ್ರಧಾನ ಕಾರ್ಯದರ್ಶಿ ಎಸ್. ಚಂದ್ರಶೇಖರ್, “ಕಾರ್ಮಿಕರ ವೇತನ ಪರಿಷ್ಕರಣೆ ಸೇರಿದಂತೆ ಅನೇಕ ಬೇಡಿಕೆಗಳ ಕುರಿತು ಹೆಚ್ಎಎಲ್ ಆಡಳಿತ ಮಂಡಳಿಯ ಜೊತೆಗಿನ ಮಾತುಕತೆ ವಿಫಲವಾಗಿದೆ. ಹೀಗಾಗಿ ಕಾರ್ಮಿಕ ಕಾನೂನುಗಳಿಗೆ ಅನುಸಾರವಾಗಿ ನಾವು ಹದಿನೈದು ದಿನಗಳ ಹಿಂದೆ (ಸೆಪ್ಟೆಂಬರ್.30) ನೊಟೀಸ್ ನೀಡಿದ್ದು ಈ ಪ್ರಕಾರ ಸೋಮವಾರದಿಂದ ಅನಿರ್ದಿಷ್ಟಾವಧಿ ಮುಷ್ಕರವನ್ನು ಘೋಷಿಸಲಾಗಿದೆ” ಎಂದು ತಿಳಿಸಿದ್ದಾರೆ.

“ನಮ್ಮ ಬೇಡಿಕೆಗಳನ್ನು ಪರಿಗಣಿಸಲು ವ್ಯವಸ್ಥಾಪಕರು ನಿರಾಕರಿಸಿದ್ದರಿಂದ ಸೋಮವಾರದಿಂದ ದೇಶದ ಎಲ್ಲಾ ವಿವಿಧ 9 ಸ್ಥಳಗಳಲ್ಲಿ ಮುಷ್ಕರವನ್ನು ಪ್ರಾರಂಭಿಸಲು ನಾವು ಕರೆ ನೀಡಿದ್ದೇವೆ. ಹೀಗಾಗಿ ನಮ್ಮ ಎಲ್ಲಾ 20 ಸಾವಿರ ಕಾರ್ಮಿಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸಾರ್ವಜನಿಕ ಕ್ಷೇತ್ರದಲ್ಲಿ ಕಳೆದ 55 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಏರೋಸ್ಪೇಸ್ ಬೆಂಗಳೂರು, ಹೈದರಾಬಾದ್, ಒಡಿಶಾ, ಲಖನೌ ಮತ್ತು ಮಹಾರಾಷ್ಟ್ರದ ನಾಸಿಕ್ ಸೇರಿದಂತೆ 5 ಉತ್ಪಾದನಾ ಸಂಕೀರ್ಣಗಳು ಮತ್ತು ದೇಶದಾದ್ಯಂತ 4 ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳಲ್ಲಿ ಒಟ್ಟಾರೆ 20,000 ಜನ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಈ ನಡುವೆ ಕಾರ್ಮಿಕರ ಮುಷ್ಕರವನ್ನು ನಿಲ್ಲಿಸಿ ಪರಿಸ್ಥಿತಿಯನ್ನು ಹತೋಟಿಗೆ ತರುವ ಸಲುವಾಗಿ ಹೆಚ್ಎಎಲ್ ಆಡಳಿತ ಮಂಡಳಿ ಕೆಫೆಟೇರಿಕಾ ವ್ಯವಸ್ಥೆಯ ಅಡಿಯಲ್ಲಿ ಭತ್ಯೆಯನ್ನು ಶೇ.22 ರಷ್ಟು ನೀಡುವ ಭರವಸೆ ನೀಡಿತ್ತು. ಅಲ್ಲದೆ, ಪರಿಷ್ಕೃತ ದರದಲ್ಲಿನ ಲಾಭದ ಶೇ.11 ರಷ್ಟನ್ನು ಕಾರ್ಮಿಕರಿಗೆ ನೀಡಲು ಮುಂದಾಗಿತ್ತು. ಆದರೆ, ಕಾರ್ಮಿಕ ಸಂಘ ಇದಕ್ಕೆ ಒಪ್ಪಿಲ್ಲ. ಹೀಗಾಗಿ ಮುಷ್ಕರದಿಂದ ಉಂಟಾಗಬಹುದಾದ ದುಷ್ಟರಿಣಾಮಗಳ ಹಾಗೂ ಬಿಕ್ಕಟ್ಟಿನ ಕುರಿತು ಕಾರ್ಮಿಕ ಸಂಘಟನೆಗಳಿಗೆ ತಿಳಿಸಲಾಗಿದೆ ಎಂದು ಹೆಚ್ಎಎಲ್ ಆಡಳಿತ ಮಂಡಳಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ.
ಈ ಹಿಂದೆ 2012 ಮತ್ತು 2007ರಲ್ಲಿ ವೇತನ ಪರಿಷ್ಕರಣೆ ಮಾಡಲಾಗಿದೆ. ಪ್ರತಿ 5 ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡಬೇಕಿರುವ ಕಾರಣ 2017 ಜನವರಿ 1 ರಿಂದ ನೂತನ ವೇತನ ಪರಿಸ್ಕರಣೆ ಆಗಬೇಕಿತ್ತು. ಕಾರ್ಯನಿರ್ವಾಹಕರ ವೇತನ ಪರಿಷ್ಕರಣೆ ಕೂಡ ಅದೇ ದಿನಾಂಕದಿಂದ (ಜನವರಿ 1, 2017) ಜಾರಿಗೆ ಬರಲಿದೆ ಎಂದು ಸಾರ್ವಜನಿಕ ಉದ್ಯಮ ಇಲಾಖೆ (ಡಿಪಿಇ) ನಿರ್ದೇಶನ ನೀಡಿತ್ತು. ಅದರಂತೆ ಈ ಪರಿಷ್ಕೃತ ವೇತನ ನವೆಂಬರ್ 2017 ರಲ್ಲಿ ಜಾರಿಗೆ ಬರಬೇಕಿತ್ತು. ಆದರೆ, ಈ ಪರಿಷ್ಕೃತ ವೇತನ ಈವರೆಗೆ ಕಾರ್ಮಿಕರ ಕೈಸೇರದಿರುವುದು ಬಿಕ್ಕಟ್ಟಿಗೆ ಕಾರಣವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ