ರಾಜ್ಯ ಬಿಜೆಪಿಯಲ್ಲಿ ಸೃಷ್ಟಿಯಾಗಿರುವ ಬಣ ರಾಜಕೀಯ

ಬೆಂಗಳೂರು, ಸೆ.29- ರಾಜ್ಯ ಬಿಜೆಪಿಯಲ್ಲಿ ಸೃಷ್ಟಿಯಾಗಿರುವ ಬಣ ರಾಜಕೀಯ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ.

ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಪರೋಕ್ಷವಾಗಿ ಕಟ್ಟಿ ಹಾಕಲು ಪಕ್ಷದಲ್ಲಿರುವ ಒಂದು ಬಣ ಸದ್ಯದಲ್ಲೇ ಕಾರ್ಯಾಚರಣೆಗೆ ಇಳಿಯಲಿದೆ.

ಇದಕ್ಕೆ ಪ್ರತಿಯಾಗಿ ಸಿಎಂ ಕೂಡ ಸೆಡ್ಡು ಹೊಡೆದಿದ್ದು , ಪಕ್ಷದ ಆಯಕಟ್ಟಿನಲ್ಲಿ ತಮ್ಮ ವಿರೋಧಿಗಳನ್ನು ನೇಮಿಸಿಕೊಂಡರೆ ನಾನು ಕೂಡ ನನ್ನ ಆಪ್ತರಿಗೆ ಇನ್ನಷ್ಟು ಪ್ರಮುಖ ಹುದ್ದೆಗಳನ್ನು ನೀಡುತ್ತೇನೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಸರ್ಕಾರ ಮತ್ತು ಸಂಘಟನೆಯ ನಡುವೆ ಗೊಂದಲವಿಲ್ಲದಂತೆ ನಡೆದುಕೊಂಡು ಹೋಗುವಂತೆ ವರಿಷ್ಠರು ಬಿಎಸ್‍ವೈ ಮತ್ತು ಕರ್ನಾಟಕ ಮೂಲದ ರಾಷ್ಟ್ರೀಯ ಪ್ರಮುಖ ನಾಯಕರೊಬ್ಬರಿಗೆ ಸೂಚನೆ ಕೊಟ್ಟಿದ್ದರು.

ಆದರೆ ಯಡಿಯೂರಪ್ಪ ಅಧಿಕಾರ ಸ್ವೀಕರಿಸುತ್ತಿದ್ದಂತೆ ಪಕ್ಷ ಮತ್ತು ಸರ್ಕಾರದಲ್ಲೂ ತಮ್ಮ ಪ್ರಭಾವ ಬೀರಲು ತೆರೆ ಮರೆಯಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೂಲಕ ಕಾರ್ಯಾಚರಣೆ ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ರಾಜ್ಯಾಧ್ಯಕ್ಷರ ನೇಮಕಾತಿ, ಉಪ ಮುಖ್ಯಮಂತ್ರಿಗಳ ನೇಮಕ, ಸಚಿವ ಸಂಪುಟ ವಿಸ್ತರಣೆ, ಪದಾಧಿಕಾರಿಗಳ ನೇಮಕಾತಿ ವಿಷಯದಲ್ಲೂ ಬಿಎಸ್‍ವೈ ಅವರನ್ನು ಗುರಿಯಾಗಿಟ್ಟುಕೊಂಡೇ ನೇಮಕ ಮಾಡಲಾಗುತ್ತದೆ ಎಂಬ ಆಪಾದನೆಗಳು ಕೇಳಿ ಬರುತ್ತಿವೆ.

ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಇನ್ನು ಮುಂದೆ ಕುರ್ಚಿಯನ್ನು ಇನ್ನಷ್ಟು ಗಟ್ಟಿ ಮಾಡಿಕೊಳ್ಳಲು ಮುಂದಾಗಿದ್ದಾರೆ.

ಮುಂಬರುವ ಸಚಿವ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿಯಲ್ಲೂ ತಮ್ಮ ಆಪ್ತರಿಗೆ ಮಣೆ ಹಾಕುವ ಮೂಲಕ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂಬ ಸಂದೇಶವನ್ನು ರವಾನಿಸಲು ಮುಂದಾಗಿದ್ದಾರೆ.

ಮೂರು ದಿನಗಳ ಹಿಂದೆ ಪಕ್ಷದ ಉಪಾಧ್ಯಕ್ಷರಾಗಿ ಭಾನುಪ್ರಕಾಶ್ ಮತ್ತು ನಿರ್ಮಲ್ ಕುಮಾರ್ ಸುರಾನಾ ಅವರನ್ನು ನೇಮಕ ಮಾಡಿದಾಗಲೇ ಬಿಎಸ್‍ವೈ ಯೋಜನಾ ಮಂಡಳಿ ಉಪಾಧ್ಯಕ್ಷರಾಗಿ ತಮ್ಮ ಆಪ್ತ ಬಿ.ಜೆ.ಪುಟ್ಟಸ್ವಾಮಿ ಹಾಗೂ ರಾಜಕೀಯ ಕಾರ್ಯದರ್ಶಿಯಾಗಿ ಶಂಕರ ಪಾಟೀಲ್ ನೇಮಿಸಿದ್ದರು.

ಇದೀಗ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಅನರ್ಹರಿಗೆ ಟಿಕೆಟ್ ತಪ್ಪಿಸಲು ಬಿಜೆಪಿಯ ಒಂದು ಬಣ ಮುಂದಾಗಿದೆ. ಅಧಿಕಾರ ಉಳಿಯಲಿ, ಬಿಡಲಿ ನಾನು ಯಾವುದೇ ಕಾರಣಕ್ಕೂ ಕೊಟ್ಟ ಮಾತಿನಿಂದ ಹಿಂದೆ ಸರಿಯುವುದಿಲ್ಲ ಎಂದು ಪಕ್ಷದ ವರಿಷ್ಠರಿಗೆ ಸ್ಪಷ್ಟ ಸಂದೇಶವನ್ನು ಕೊಟ್ಟಿದ್ದಾರೆ.

ಅಲ್ಲದೆ ಇನ್ನು ಮುಂದೆ ಸರ್ಕಾರದ ಆಯಕಟ್ಟಿನಲ್ಲೂ ತಮ್ಮ ಆಪ್ತ ಶಾಸಕರು ಮತ್ತು ಬೆಂಬಲಿಗರಿಗೆ ಪ್ರಮುಖ ಹುದ್ದೆಗಳನ್ನು ಕೊಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇನ್ನು ನಿಗಮ ಮಂಡಳಿಗೆ (ಕೆಲವು ಹೊರತುಪಡಿಸಿ)ಅಧ್ಯಕ್ಷರನ್ನು ನೇಮಕಾತಿ ಮಾಡಿಲ್ಲ. ಸಂಪುಟದಲ್ಲಿ ಇನ್ನು 16 ಖಾತೆಗಳು ಖಾಲಿ ಇದ್ದು ಇದರಲ್ಲಿ ಕಾಂಗ್ರೆಸ್-ಜೆಡಿಎಸ್‍ನಿಂದ ಬಂದಿರುವವರಿಗೆ 8 ಖಾತೆಗಳನ್ನು ನೀಡಲು ಬಿಎಸ್‍ವೈ ತೀರ್ಮಾನಿಸಿದ್ದಾರೆ.

ಉಳಿದ 8 ಖಾತೆಗಳಲ್ಲಿ ತಮ್ಮ ಆಪ್ತರೆನಿಸಿದ ಉಮೇಶ್ ಕತ್ತಿ , ಎಂ.ಪಿ.ರೇಣುಕಾಚಾರ್ಯ, ಹರತಾಳ ಹಾಲಪ್ಪ ಮತ್ತಿತರರಿಗೆ ಮಂತ್ರಿ ಸ್ಥಾನ ಉಳಿದವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ಕಲ್ಪಿಸುವ ಲೆಕ್ಕಾಚಾರದಲ್ಲಿದ್ದಾರೆ.

ನಳಿನ್‍ಕುಮಾರ್ ಕಟೀಲ್ ಇತ್ತೀಚೆಗೆ ಪಕ್ಷದ ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ರಾಷ್ಟ್ರೀಯ ನಾಯಕರೊಬ್ಬರ ಅಣತಿಯಂತೆಯೇ ನಡೆದುಕೊಳ್ಳುತ್ತಿದ್ದಾರೆ ಎಂಬ ಗುಸುಗುಸು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ.

ಯಡಿಯೂರಪ್ಪನವರ ಹಿರಿತನ, ಅವರ ಸಾಮಥ್ರ್ಯವನ್ನು ಲೆಕ್ಕಿಸದೆ ಈ ನಾಯಕರ ಸೂಚನೆ ಮೇರೆಗೆ ನೇಮಕಾತಿ ನಡೆಯುತ್ತಿದೆ.

ಹಿಂದೆ ಇದೇ ರೀತಿ ಯಡಿಯೂರಪ್ಪನವರನ್ನು ನಡೆಸಿಕೊಂಡ ಪರಿಣಾಮ ಅವರು ಪಕ್ಷ ಬಿಟ್ಟು ಕೆಜೆಪಿ ಕಟ್ಟಿದ್ದರಿಂದ ಪರಿಸ್ಥಿತಿ ಏನಾಯಿತು ಎಂಬುದು ಎಲ್ಲರಿಗೂ ಗೊತ್ತು. ಪುನಃ ಇಂತಹ ತಪ್ಪನ್ನು ಎಸಗದೆ ವರಿಷ್ಠರು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಪಕ್ಷಕ್ಕೆ ಭಾರೀ ಹೊಡೆತ ಬೀಳಲಿದೆ ಎಂದು ಹೆಸರು ಹೇಳಲಿಚ್ಛಿಸದ ಪ್ರಮುಖರೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ