ಆಸ್ತಿ, ಸಂಪಾದನೆ ಇದ್ದದ್ದರಿಂದಲೇ ಆದಾಯ ಬಂದಿದೆ; ಇದು ಹೇಗೆ ಆರ್ಥಿಕತೆಗೆ ಕಂಟಕ?: ಡಿಕೆಶಿ ಪರ ವಕೀಲರ ಪ್ರಶ್ನೆ

ನವದೆಹಲಿ: ಡಿ.ಕೆ. ಶಿವಕುಮಾರ್ ಅವರಿಗೆ ಸೇರಿದ ದೆಹಲಿಯ ಫ್ಲ್ಯಾಟ್ ಒಂದರಲ್ಲಿ ಪತ್ತೆಯಾದ ಅಕ್ರಮ ಹಣ ಹಾಗೂ ಅವರ ಜಾಮೀನು ಕುರಿತ ಅರ್ಜಿ ಇಂದು ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಮತ್ತೆ ವಿಚಾರಣೆ ನಡೆಯುತ್ತಿದೆ. ಜಾರಿ ನಿರ್ದೇಶನಾಲಯದ ಪರ ವಕೀಲ ಕೆ.ಎಂ. ನಟರಾಜ್ ವಾದ ಮಂಡಿಸುತ್ತಿದ್ದಾರೆ.

ತಮ್ಮ ಸಹೋದರ ಡಿಕೆ ಸುರೇಶ್ ಹೆಸರಲ್ಲಿ ಡಿಕೆಶಿ ಬೇನಾಮಿ ಆಸ್ತಿ ಮಾಡಿದ್ದಾರೆ. ಡಿಕೆ ಸುರೇಶ್ ಹೆಸರಲ್ಲಿ ಇರುವ 27 ಆಸ್ತಿಗಳ ಪೈಕಿ 10 ಮಾತ್ರ ಪಿತ್ರಾರ್ಜಿತ ಆಸ್ತಿಯಾಗಿವೆ. ಉಳಿದ 17 ಆಸ್ತಿಗಳ ಮೂಲದ ಬಗ್ಗೆ ಇನ್ನೂ ಗೊತ್ತಾಗಿಲ್ಲ. ಅವುಗಳು ಬೇನಾಮಿಯಾಗಿರಬಹುದು. ಇದರ ಬಗ್ಗೆ ಡಿಕೆಶಿ ಅವರನ್ನು ವಿಚಾರಣೆಗೊಳಪಡಿಸಬೇಕು. ಈ ಹಂತದಲ್ಲಿ ಅವರಿಗೆ ಜಾಮೀನು ನೀಡಬಾರದು. ಅವರಿಗೆ ಜಾಮೀನು ಸಿಕ್ಕರೆ ಸಾಕ್ಷ್ಯ ನಾಶಕ್ಕೆ ಮುಂದಾಗಬಹುದು. ಅಕ್ಟೋಬರ್ 1ರವರೆಗೆ ಅವರನ್ನು ನ್ಯಾಯಾಂಗ ಕಸ್ಟಡಿಯಲ್ಲೇ ಮುಂದುವರಿಸಿ ಎಂದು ಕೆ.ಎಂ. ನಟರಾಜು ಅವರು ಕೋರ್ಟ್​ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಡಿಕೆ ಶಿವಕುಮಾರ್ ಅವರು ಕೃಷಿಕರೆಂದು ಹೇಳಿಕೊಳ್ಳುತ್ತಾರೆ. ಅವರ ಬಳಿ ಇರುವುದು ಬಹುತೇಕ ಕೃಷಿಯೇತರ ಆಸ್ತಿಗಳಾಗಿವೆ. ಐಟಿ ಅಧಿಕಾರಿಗಳು ದೊಡ್ಡ ಪ್ರಮಾಣದಲ್ಲಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ತನಿಖೆಯಲ್ಲಿ ಸಣ್ಣ ಪೇಪರ್ ಕೂಡ ಮುಖ್ಯ. ಈ ಅಪಾರ ದಾಖಲೆಗಳನ್ನು ಪರಿಶೀಲಿಸಬೇಕಿದೆ. ಇದು 800ಕ್ಕೂ ಹೆಚ್ಚು ಕೋಟಿಯ ಪ್ರಕರಣ. ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕಿದೆ ಎಂದು ಇಡಿ ಪರ ವಕೀಲರು ತಿಳಿಸಿದರು.

ಕೆ.ಎಂ. ನಟರಾಜು ಅವರು ಈ ಸಂದರ್ಭದಲ್ಲಿ ಪಿ. ಚಿದಂಬರಮ್ ಪ್ರಕರಣವನ್ನು ಉಲ್ಲೇಖಿಸಿದರು. ಅಸಮರ್ಪಕ ಉತ್ತರ ನೀಡುತ್ತಿದ್ದ ಚಿದಂಬರಮ್ ಅವರಿಗೆ ಜಾಮೀನು ನಿರಾಕರಿಸಲಾಗಿದೆ. ಇಲ್ಲಿ ಡಿಕೆ ಶಿವಕುಮಾರ್ ಕೂಡ ವಿಚಾರಣೆಯಲ್ಲಿ ಸರಿಯಾಗಿ ಉತ್ತರಿಸುತ್ತಿಲ್ಲ. ಅಪ್ರಸ್ತುತ ಉತ್ತರ ನೀಡುತ್ತಿದ್ದಾರೆ. ಸರಳ ಪ್ರಶ್ನೆಗೂ ಸಮಂಜಸ ಉತ್ತರ ನೀಡಿಲ್ಲ ಎಂಬುದು ಇಡಿ ವಕೀಲರ ವಾದ.
ಡಿಕೆಶಿ ಪರ ವಕೀಲರ ವಾದ:
ಡಿಕೆ ಶಿವಕುಮಾರ್ ಅಭಿಷೇಕ್ ಮನು ಸಿಂಘ್ವಿ ಮೊದಲಿಗೆ ವಾದ ಮಂಡಿಸಿದಿದರು. ಜಾರಿ ನಿರ್ದೇಶನಾಲಯದ ವಕೀಲರ ವಾದ ಆಧಾರರಹಿತವಾಗಿದೆ. ಅದರಲ್ಲಿ ಯಾವುದೇ ಸಾರ ಇಲ್ಲ. ನೀವು ನೂರು ಬಾರಿ ಬಾರಿ ಹೇಳಿ, ಸಾವಿರ ಬಾರಿ ಹೇಳಿದರೂ ಅವೇ ಆರೋಪಗಳನ್ನ ಮಾಡಬೇಕಷ್ಟೇ. ಇವು ಸಂಪೂರ್ಣವಾಗಿ ಪೂರ್ವಗ್ರಹಪೀಡಿತ ಆರೋಗಳಷ್ಟೇ. ಮೊದಲ ದಿನದಿಂದಲೂ ಇವೇ ಆರೋಪಗಳನ್ನ ಮಾಡುತ್ತಾ ಬಂದಿದ್ದಾರೆ. ಈ ರೀತಿ ಮಾಡಿದರೆ ನ್ಯಾಯಾಧೀಶರ ಮೇಲೆ ಪ್ರಭಾವ ಬೀರಲು ಸಾಧ್ಯವೇ? ಇಡಿ ವಿಚಾರಣೆ ಪ್ರಾರಂಭವಾಗಿ ಇವತ್ತಿಗೆ 22 ದಿನಗಳಾಗಿವೆ. ಪ್ರತೀ ದಿನ 9 ಗಂಟೆ ವಿಚಾರಣೆ ಎಂದರೂ 162 ಗಂಟೆ ವಿಚಾರಣೆ ಮಾಡಿದ್ದಾರೆ. ಇಷ್ಟು ಸುದೀರ್ಘ ಅವಧಿಯಲ್ಲಿ ಏನು ವಿಚಾರಣೆ ಮಾಡಿದ್ದಾರೆ? ಇಷ್ಟು ದೀರ್ಘ ಸಮಯ ಸಿಕ್ಕರೂ ಸರಿಯಾಗಿ ವಿಚಾರಣೆ ಮಾಡದಿದ್ದರೆ ಅದಕ್ಕೆ ಇಡಿಯೇ ಹೊಣೆ ಎಂಬುದು ಸಿಂಘ್ವಿ ಅವರ ವಾದವಾಗಿದೆ.

ಡಿಕೆ ಶಿವಕುಮಾರ್ ಅವರು ಸಾಕ್ಷ್ಯನಾಶ ಮಾಡುತ್ತಾರೆ, ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುತ್ತಾರೆ ಎಂಬುದು ಸುಳ್ಳು. ಅವರಿಗೆ ನೀವು ಜಾಮೀನು ನೀಡುವಾಗ ಯಾವ ಷರತ್ತನ್ನು ಬೇಕಾದರೂ ಹಾಕಿರಿ ಎಂದು ಡಿಕೆಶಿ ಪರ ವಕೀಲರು ಮನವಿ ಮಾಡಿಕೊಂಡರು.
2017ರಲ್ಲಿ ಪ್ರಕರಣ ಶುರುವಾಯಿತು. 2018ರಿಂದ ನೋಟೀಸ್ ನೀಡಲು ಪ್ರಾರಂಭವಾಯಿತು. ಈಗ ತನಿಖೆ ಹಂತದಲ್ಲಿದೆ. ಇಲ್ಲಿಯವರೆಗೆ ಯಾವ ದಾಖಲೆಗಳನ್ನ ತಿರುಚಲಾಗಿದೆ? ಯಾವ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಲಾಗಿದೆ? ಎಂದು ಅಭಿಷೇಕ್ ಮನು ಸಿಂಘ್ವಿ ವಾದಿಸಿದರು.
ಆದಾಯದಿಂದ ಆಸ್ತಿ ಬಂತು, ಆಸ್ತಿಯಿಂದ ಆದಾಯ ಬಂತು. ಈ ಆದಾಯ-ಆಸ್ತಿಯನ್ನು ಅಕ್ರಮ ಎಂದು ಸಾಬೀತುಪಡಿಸಲು ಇಡಿ ಯತ್ನಿಸುತ್ತಿದೆ. ಶೂನ್ಯದಿಂದ ಏನನ್ನೂ ಸೃಷ್ಟಿಸಲು ಸಾಧ್ಯವಿಲ್ಲ. ಆಸ್ತಿ, ಸಂಪಾದನೆ ಇದ್ದದ್ದರಿಂದಲೇ ಆಸ್ತಿ ಆಗಿದೆ, ಆದಾಯ ಬಂದಿದೆ. ಈ ಪ್ರಕರಣ ದೇಶದ ಆರ್ಥಿಕತೆಗೆ ಹೇಗೆ ಕಂಟಕವಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಇಡಿ ವಕೀಲರಿಗೆ ಸಿಂಘ್ವಿ ಸವಾಲು ಹಾಕಿದರು.
ಡಿಕೆ ಶಿವಕುಮಾರ್ ಮೇಲೆ ಜಾರಿ ನಿರ್ದೇಶನಾಲಯ ದಾಖಲಿಸಿರುವ ದೂರಿಗೆ ಆಧಾರವಾದರೂ ಏನು? ತೆರಿಗೆ ಕಟ್ಟಿಲ್ಲದಿದ್ದರೆ ಆದಾಯ ತೆರಿಗೆ ಇಲಾಖೆ ದೂರು ದಾಖಲಿಸಿಕೊಳ್ಳುತ್ತದೆ. ಐಸಿಐಆರ್ ಎಂಬ ಒಂದೇ ಆಧಾರದ ಮೇಲೆ ಇಡಿ ದೂರು ದಾಖಲಿಸಿಕೊಂಡಿದೆ ಎಂದು ಡಿಕೆಶಿ ಪರ ವಕೀಲರು ಆರೋಪಿಸಿದರು.
ಈಗಾಗಲೇ ಬುಧವಾರ ಹಾಗೂ ಗುರುವಾರ ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ನಡೆಸಿರುವ ವಿಶೇಷ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಮುಂದೂಡಿತ್ತು. ಪರಿಣಾಮ ಆಸ್ಪತ್ರೆಯಿಂದ ತಿಹಾರ್ ಜೈಲಿಗೆ ಶಿಫ್ಟ್ ಆಗಿದ್ದ ಡಿಕೆಶಿ ಶುಕ್ರವಾರ ತಿಹಾರ್ ಜೈಲಿನಲ್ಲೇ ಕಳೆಯಬೇಕಾಗಿತ್ತು. ಇಂದು ಮತ್ತೆ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಅಜಯ್ ಕುಮಾರ್ ಕುಹರ್ ಎದುರು ಜಾಮೀನು ಅರ್ಜಿ ವಿಚಾರಣೆಗೆ ಬಂದಿದೆ.
ಸೆ. 4ರಂದು ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿದ್ದ ಡಿಕೆ ಶಿವಕುಮಾರ್ ಅವರು ಅಕ್ಟೋಬರ್ ಒಂದರವರೆಗೆ ನ್ಯಾಯಾಂಗ ಕಸ್ಟಡಿಯಲ್ಲಿದ್ದಾರೆ. ಇವರ ಪರವಾಗಿ ಅಭಿಷೇಕ್ ಮನು ಸಿಂಘ್ವಿ, ಕಪಿಲ್ ಸಿಬಲ್, ಮುಕುಲ್ ರೋಹ್ಟಗಿ ಅವರು ವಾದ ಮಂಡಿಸುತ್ತಿದ್ದಾರೆ.
ಮೊನ್ನೆಯ ವಿಚಾರಣೆಯಲ್ಲಿ ಡಿಕೆಶಿ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, “ತಂದೆ ಹಾಗೂ ಅಜ್ಜಿಯಿಂದ ಬಂದ ಹಣ ಹವಾಲಾ ಅವ್ಯವಹಾರ ಅಕ್ರಮ ಹೇಗಾಗುತ್ತೆ? ಐಶ್ವರ್ಯ ಕಾಲ ಕಾಲಕ್ಕೆ ಆದಾಯ ತೆರಿಗೆ ಸಲ್ಲಿಸಿದ್ದಾರೆ. 7 ಬಾರಿಯೂ ಡಿಕೆಶಿ ಚುನಾವಣಾ ಆಯೋಗಕ್ಕೆ ಆಸ್ತಿ ವಿವರ ನೀಡಿದ್ದಾರೆ. 800 ಕೋಟಿ ಹಣವನ್ನು ಸ್ವತಃ ಡಿಕೆಶಿ ಘೋಷಿಸಿದ್ದಾರೆ. ಹೀಗಾಗಿ ಅದು ಅಕ್ರಮ ಹೇಗಾಗುತ್ತೆ? ಎಂದು ಇಡಿ ವಿಚಾರಣೆಯನ್ನು ಪ್ರಶ್ನೆ ಮಾಡಿದ್ದರು.
ಅಲ್ಲದೆ, ಶರ್ಮಾ ಟ್ರಾವೆಲ್ ವ್ಯವಹಾರದಲ್ಲಿ ಕೋಟಿ ಕೋಟಿ ಹಣ ಚಲಾವಣೆಯಾಗುತ್ತಿದೆ. ಇದು 50 ವರ್ಷದ ಹಳೆಯ ಕಂಪೆನಿ. ಹೀಗಾಗಿ, ಅವರಿಗೆ ಸಂಬಂಧಿಸಿದ ಮನೆಯಲ್ಲಿ 8 ಕೋಟಿ ಹಣ ಸಿಗುವುದು ಸಾಮಾನ್ಯ. ಆದರೆ, ಅದರ ಮಾಲೀಕ ಸುನೀಲ್ ಶರ್ಮಾ ಡಿಕೆಶಿ ಗೆಳೆಯ ಎಂದ ಮಾತ್ರಕ್ಕೆ ಆ ಪ್ರಕರಣಕ್ಕೆ ಡಿಕೆಶಿ ಅವರನ್ನು ಹೇಗೆ ಲಿಂಕ್ ಮಾಡ್ತೀರ? ಎಂದು ಅವರು ಇಡಿ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದರು. ಅಲ್ಲದೆ, ಇಡಿ ಇಲಾಖೆಯಿಂದ ದುರುದ್ದೇಶಪೂರಿತ ತನಿಖೆ ನಡೆಸಲಾಗುತ್ತಿದೆ” ಎಂದೂ ಆರೋಪಿಸಿದ್ದರು.
ಇಂದಿನ ವಿಚಾರಣೆಯ ವೇಳೆಯೂ ಅವರು ಇದೇ ಪ್ರಶ್ನೆಗಳನ್ನು ನ್ಯಾಯಮೂರ್ತಿಗಳ ಎದುರು ಇಡುತ್ತಿದ್ಧಾರೆ. ಆದರೆ, ಜಾರಿ ನಿರ್ದೇಶನಾಲಯದ ವಕೀಲರಾದ ಕೆ.ಎಂ. ನಟರಾಜ್ ಅವರು, ಡಿಕೆಶಿ ಅವರಿಗೆ ಜಾಮೀನು ನೀಡಬಾರದು ಎಂದು ನ್ಯಾಯಾಲಯದಲ್ಲಿ ಕೇಳಿಕೊಂಡಿದ್ದಾರೆ. ಅಲ್ಲದೆ, ಗುರುವಾರದ ಕೊನೆಯ ಅವಧಿಯಲ್ಲಿ ಈ ಕುರಿತು ತಮ್ಮ ವಿಸ್ಕೃತ ವಾದವನ್ನೂ ಮಂಡಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ