ಕೊಪ್ಪಳದಲ್ಲಿ ಡ್ರೈವಿಂಗ್ ಟ್ರ್ಯಾಕ್, ಆರ್‌ಟಿಒ ಕಚೇರಿ ನಿವೇಶನ ಮಂಜೂರಿಗೆ ಡಿಸಿಎಂ ಸವದಿಗೆ ಅಮರೇಶ್ ಕರಡಿ ಮನವಿ

ಕೊಪ್ಪಳ ಸೆ 8: ಕೊಪ್ಪಳ ಜಿಲ್ಲೆಯಾಗಿ 20 ವರ್ಷ ಕಳೆದರೂ ಇದುವರೆಗೂ ಆರ್‌ಟಿಒ ಕಚೇರಿಗೆ ಸ್ವಂತ ಕಟ್ಟಡ, ಸ್ವಂತ ನಿವೇಶನ ಇಲ್ಲ. ಹೀಗಾಗಿ ಜಿಲ್ಲೆಯಲ್ಲಿ ಡ್ರೈವಿಂಗ್ ಟ್ರ್ಯಾಕ್ ಹಾಗೂ ಆರ್‌ಟಿಒ ಕಚೇರಿ ನಿರ್ಮಾಣಕ್ಕೆ ಬೇಕಾದ ಸೂಕ್ತ ನಿವೇಶನ ಮಂಜೂರಿ ಮಾಡುವಂತೆ ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಬೂತ್ ಸಮಿತಿ ಸಂಚಾಲಕ ಅಮರೇಶ ಕರಡಿ ಮನವಿ ಮಾಡಿದರು.

ಬೆಂಗಳೂರಿನಲ್ಲಿನ ಸಆರಿಗೆ ಸಚಿವರ ಕಚೇರಿಗೆ ತೆರಳಿ ಈ ಕುರಿತು ಮನವಿ ಸಲ್ಲಿಸಿದ ಅವರು, ಕೊಪ್ಪಳ ಜಿಲ್ಲೆಯಾಗಿ ಎರಡು ದಶಕ ಕಳೆದಿದ್ದರೂ ಇದುವರೆಗೂ ಆರ್‌ಟಿಒ ಕಚೇರಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಇದುವರೆಗೂ ಸ್ವಂತ ನಿವೇಶನ ನೀಡಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಮುಂದಾಗದಿರುವುದು ಕೊಪ್ಪಳ ಜಿಲ್ಲೆಯ ಜನತೆಯ ದೌರ್ಬಾಗ್ಯ. ಮೊದಲ 10 ವರ್ಷ ಎಪಿಎಂಸಿಯ ಹಳೆ ಕಟ್ಟಡದಲ್ಲಿ ಈ ಕಚೇರಿ ಕಾರ್ಯ ನಿರ್ವಹಿಸಿದರೆ ನಂತರದಲ್ಲಿ ನಗರದ ಹೊರ ವಲಯದ ಬಾಡಿಗೆ ಜಾಗೆಯಲ್ಲಿ ಕೆಲಸ ನಿರ್ವಹಿಸುತ್ತಿದೆ. ಇದರಿಂದಾಗಿ ಕೊಪ್ಪಳ ಜನತೆಗೆ ತೀವ್ರ ತೊಂದರೆಯಾಗುತ್ತಿದೆ. ಇದಲ್ಲದೆ ಬಾಡಿಗೆ ಕಟ್ಟಡ ಇರುವ ಕಾರಣ ಸರ್ಕಾರದ ಹಣ ಸುಖಾ ಸುಮ್ಮನೆ ಪೋಲಾಗುತ್ತಿದೆ. ಅಲ್ಲದೆ ಇಲ್ಲಿ ಯಾವುದೇ ಮೂಲ ಸೌಕರ್ಯಗಳು ಇಲ್ಲ. ತಗಡಿನ ಶಡ್‌ನಲ್ಲಿ ಕಚೇರಿ ನಡೆಯುತ್ತಿದೆ. ಸಾರ್ವಜನಿಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೆ ಸಿಬ್ಬಂದಿ ಬಿಸಿಲಿನ ಪ್ರಖರಕ್ಕೆ ತೀವ್ರ ಬಳಲುತ್ತಾರೆ. ಇದನ್ನೆಲ್ಲ ಸರಿಪಡಿಸಲು ಕೂಡಲೇ ಆರ್‌ಟಿಒಗೆ ಸ್ವಂತ ನಿವೇಶನ ನೀಡಿ, ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಸೂಕ್ತ ಅನುದಾನ ನೀಡುವ ಮೂಲಕ ಕೊಪ್ಪಳ ಜಿಲ್ಲೆಯ ಜನತೆಯ ಬಹುದಿನಗಳ ಕನಸನ್ನು ಈಡೇರಿಸಬೇಕು ಎಂದು ಕೋರಿದರು.

ಡ್ರೈವಿಂಗ್ ಟ್ರ್ಯಾಕ್
ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಟೆಸ್ಟ್ ಡ್ರೈವಿಂಗ್‌ಗಾಗಿ ಇಲಾಖೆ ನಿಗದಿಪಡಿಸಿದ ಸೂಕ್ತ ಡ್ರೈವಿಂಗ್ ಟ್ರ್ಯಾಕ್ ಇವೆ. ಆದರೆ ಕೊಪ್ಪಳದಲ್ಲಿ ಮಾತ್ರ ಇದು ಸಾಧ್ಯವಾಗಿಲ್ಲ. ಹೊಸದಾಗಿ ಚಾಲನಾ ಪರವಾನಿಗೆ ಪಡೆಯುವವರು ಹೆದ್ದಾರಿ ಅಥವಾ ನಗರ ಪ್ರದೇಶದಲ್ಲಿ ಗಾಡಿ ಚಲಾಯಿಸಿ ಪರವಾನಿಗೆ ಪಡೆಯಬೇಕು. ಇದು ಹೆಚ್ಚು ಅಪಾಯಕಾರಿಯಾಗಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಡ್ರೈವಿಂಗ್ ಟ್ರ್ಯಾಕ್ ನಿರ್ಮಾಣಕ್ಕಾಗಿ ನಗರದ ಸುತ್ತಮುತ್ತಲ ಯಾವುದಾದರು ಒಂದು ಕಡೆ ಜಮೀನು ಖರೀದಿಸಿ ಡ್ರೈವಿಂಗ್ ಟ್ರ್ಯಾಕ್ ಹಾಗೂ ಆರ್‌ಟಿಒ ಕಚೇರಿ ನಿರ್ಮಾಣಕ್ಕೆ ಸುಮಾರು ೧೦ ಎಕರೆ ಖರೀದಿಸಲು ಮುಂದಾಗಬೇಕು ಎಂದು ಮನವಿ ಮಾಡಿಕೊಂಡರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ