ಮುಂದಿನ 14 ದಿನಗಳವರೆಗೆ ವಿಕ್ರಮ್ ನ್ನು ಸಂಪರ್ಕಿಸುವ ಪ್ರಯತ್ನ ಮುಂದುವರಿಯಲಿದೆ: ಇಸ್ರೋ

ನವದೆಹಲಿ: ಮುಂದಿನ 14 ದಿನಗಳವರೆಗೆ ವಿಕ್ರಮ್ ನ್ನು ಸಂಪರ್ಕಿಸುವ ಪ್ರಯತ್ನಗಳು ಮುಂದುವರಿಯಲಿವೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ.

ದೂರದರ್ಶನದೊಂದಿಗಿನ ಶನಿವಾರ ಸಂವಾದದಲ್ಲಿ ಮಾತನಾಡಿದ ಕೆ.ಶಿವನ್, ಕೊನೆ ಹಂತದ ಕಾರ್ಯಾಚರಣೆಯನ್ನು ಸೂಕ್ತವಾಗಿ ನಿರ್ವಹಿಸದ ಹಿನ್ನಲೆಯಲ್ಲಿ ಸಂಪರ್ಕವನ್ನು ಕಂಡುಕೊಳ್ಳಲಾಗಲಿಲ್ಲ ಎಂದು ಹೇಳಿದರು. ‘ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಗಿಂತ 2.1 ಕಿ.ಮೀ ಎತ್ತರದಲ್ಲಿದ್ದಾಗ – ಸಂವಹನ ನಷ್ಟವಾಯಿತು ಎಂದರು. ‘ಕೊನೆಯ ಭಾಗವನ್ನು ಸರಿಯಾದ ರೀತಿಯಲ್ಲಿ ಕಾರ್ಯಗತಗೊಳಿಸಲಾಗಿಲ್ಲ. ಆ ಹಂತದಲ್ಲಿಯೇ ನಾವು ಲ್ಯಾಂಡರ್‌ನೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿದ್ದೇವೆ ಮತ್ತು ತರುವಾಯ ಸಂವಹನವನ್ನು ಸ್ಥಾಪಿಸಲು ಸಾಧ್ಯವಾಗಲಿಲ್ಲ’ ಎಂದು ಅವರು ಹೇಳಿದರು.

ಸಂಪರ್ಕ ಕಡಿತಗೊಂಡ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಜೊತೆಗಿನ ಮಾತುಕತೆಯಲ್ಲಿ ಕೆ.ಶಿವನ್ ತೀವ್ರ ಭಾವುಕರಾಗಿದ್ದರು.ಇದಕ್ಕೆ ಪ್ರಧಾನಿ ಮೋದಿ ಅವರಿಗೆ ಬೆನ್ನು ತಟ್ಟಿದ್ದಲ್ಲದೆ ಅಪ್ಪುಗೆ ನೀಡಿ ಅವರಿಗೆ ಸಮಾಧಾನ ಮಾಡಿದ್ದರು. ಇದಾದ ನಂತರ ದೂರದರ್ಶನದೊಂದಿಗೆ ಮಾತನಾಡಿದ ಕೆ.ಶಿವನ್ ಪ್ರಧಾನಿ ಮೋದಿ ಅವರ ಭಾಷಣ ತಮಗೆ ಸ್ಪೂರ್ತಿ ನೀಡಿತು ಎಂದು ಹೇಳಿದರು.

ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ  ‘ವಿಜ್ಞಾನವನ್ನು ಫಲಿತಾಂಶಗಳಿಗಾಗಿ ನೋಡಬಾರದು ಆದರೆ ಸತತ ಪ್ರಯೋಗಗಳಿಂದಾಗಿ, ಮತ್ತು ಪ್ರಯೋಗಗಳು ಫಲಿತಾಂಶಗಳಾಗಿ ಪರಿವರ್ತನೆಯಾಗುತ್ತವೆ’ ಎಂದು ಹೇಳಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ