ನಾಳೆಯೇ ಸಚಿವ ಸಂಪುಟ ವಿಸ್ತರಣೆ; ಸಿಎಂ ಯಡಿಯೂರಪ್ಪಗೂ ಸರ್​ಪ್ರೈಸ್​ ನೀಡಲಿದೆಯಾ ಹೈಕಮಾಂಡ್​ ಅಂತಿಮಪಟ್ಟಿ?

ಬೆಂಗಳೂರು: ಬಿ.ಎಸ್​. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ 25 ದಿನಗಳು ಕಳೆದಿದ್ದರೂ ಮಂತ್ರಿ ಮಂಡಲ ರಚಿಸಿಲ್ಲ ಎಂದು ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸಿದ್ದವು. ಕೊನೆಗೂ ಗಳಿಗೆ ಕೂಡಿಬಂದಿದ್ದು, ನಾಳೆ ಸಚಿವ ಸಂಪುಟ ವಿಸ್ತರಣೆಯಾಗುವುದು ಖಚಿತವಾಗಿದೆ. ಆದರೆ, ಸಂಪುಟದಲ್ಲಿ ಯಾರೆಲ್ಲ ಸಚಿವರಾಗಲಿದ್ದಾರೆ ಎಂಬುದು ಸ್ವತಃ ಸಿಎಂ ಬಿ.ಎಸ್​. ಯಡಿಯೂರಪ್ಪ ಅವರಿಗೇ ಇನ್ನೂ ಗೊತ್ತಾಗಿಲ್ಲ.

3 ದಿನಗಳ ಹಿಂದೆ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಲು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ನವದೆಹಲಿಗೆ ತೆರಳಿದ್ದರು. ಆಗ ಸಿಎಂ ಯಡಿಯೂರಪ್ಪ ನೀಡಿದ್ದ ಸಂಭಾವ್ಯ ಸಚಿವರ ಪಟ್ಟಿಯನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇನ್ನೂ ಅಂತಿಮಗೊಳಿಸಿಲ್ಲ. ಭಾನುವಾರ ಅಂತಿಮಪಟ್ಟಿಯನ್ನು ಕಳುಹಿಸುವುದಾಗಿ ಹೇಳಿ ಕಳಿಸಿದ್ದ ಬಿಜೆಪಿ ಹೈಕಮಾಂಡ್​ ಇನ್ನೂ ಸಚಿವರ ಹೆಸರನ್ನು ಅಂತಿಮಗೊಳಿಸಿಲ್ಲ. ನಾಳೆಯೇ  ಸಚಿವ ಸಂಪುಟ ವಿಸ್ತರಣೆ ಖಚಿತ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದು, ರಾಜಭವನದಲ್ಲಿ ಪ್ರಮಾಣವಚನ ಸ್ವೀಕಾರಕ್ಕೆ ಸಿದ್ಧತೆಗಳು ನಡೆದಿವೆ.

ಇಂದು ಸಂಜೆ ಅಥವಾ ರಾತ್ರಿ ಸಚಿವರ ಅಂತಿಮ ಪಟ್ಟಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ತಲುಪಲಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದ ಸಿಎಂ ನಿವಾಸಕ್ಕೆ ಸಚಿವ ಸ್ಥಾನದ ಆಕಾಂಕ್ಷಿಗಳಾದ ಸುನೀಲ್ ಕುಮಾರ್, ಪ್ರಭು ಚೌಹ್ಹಾಣ್, ಉಮೇಶ್ ಕತ್ತಿ, ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ, ಬಸವರಾಜ್ ಬೊಮ್ಮಾಯಿ, ಎಂಎಲ್ಸಿ ಪುಟ್ಟಣ್ಣ ಭೇಟಿ ನೀಡಿದ್ದಾರೆ. ಸ್ವತಃ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಕೂಡ ಸಚಿವರ ಅಂತಿಮ ಪಟ್ಟಿಗೆ ಕಾಯುತ್ತಿದ್ದು, ಇಂದು ಸಂಜೆಯೊಳಗೆ ಆ ಕುತೂಹಲಕ್ಕೆ ತೆರೆ ಬೀಳಲಿದೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ ಇಂದು ಸಂಜೆ ಸಚಿವರ ಅಂತಿಮ ಪಟ್ಟಿಯನ್ನು ಕಳುಹಿಸಲಿದ್ದು, ಅಲ್ಲಿಯವರೆಗೂ ಕಾಯುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸಿದ್ದಾರೆ. ಸಚಿವರಾಗುವವರಿಗೆ ಇಂದು ರಾತ್ರಿಯೊಳಗೆ ಅಥವಾ ನಾಳೆ ಮುಂಜಾನೆ ಮಾಹಿತಿ ನೀಡಿದರೆ ಸಾಕು ಎಂದು ಅಮಿತ್ ಶಾ ಕಚೇರಿಯಿಂದ ಸೂಚನೆ ಬಂದಿದೆ.

ಹೀಗಾಗಿ, ತಮ್ಮ ಸಂಪುಟದಲ್ಲಿ ಸೇರ್ಪಡೆಯಾಗಲಿರುವ ಸಚಿವರ ಪಟ್ಟಿ ಬಗ್ಗೆ ಖುದ್ದು ಯಡಿಯೂರಪ್ಪನವರೂ ಕುತೂಹಲದಿಂದ ಕಾಯುವಂತಹ ಸ್ಥಿತಿ ಎದುರಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ