ಆತಂಕ ಸೃಷ್ಟಿಸಿರುವ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ನಾಪತ್ತೆ ಪ್ರಕರಣ

ಬೆಂಗಳೂರು/ಮಂಗಳೂರು, ಜು.30- ಪ್ರತಿಷ್ಠಿತ ಕೆಫೆ ಕಾಫಿ ಡೇ (ಸಿಸಿಡಿ) ಸಂಸ್ಥೆಯ ಸಂಸ್ಥಾಪಕ ಮತ್ತು ಯಶಸ್ವಿ ಉದ್ಯಮಿಯಾಗಿದ್ದ ವಿ.ಜಿ.ಸಿದ್ದಾರ್ಥ್ ನಾಪತ್ತೆ ಪ್ರಕರಣ ಆತಂಕ ಸೃಷ್ಟಿಸಿದೆ.

ಸಿದ್ಧಾರ್ಥ್ ಪತ್ತೆಗಾಗಿ ವ್ಯಾಪಕ ಶೋಧ ಮುಂದುವರೆದ ಸಂದರ್ಭದಲ್ಲೇ ಅವರು ಸಂಸ್ಥೆಯ ನಿರ್ದೇಶಕರು ಮತ್ತು ಕಾಫಿ ಡೇ ಸಿಬ್ಬಂದಿಗೆ ಬರೆದ ಕಟ್ಟ ಕಡೆಯ ಪತ್ರ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಆ ಪತ್ರದಲ್ಲಿದ್ದ ಸಾರಾಂಶಗಳನ್ನು ಅವಲೋಕಿಸಿದರೆ ಸಿಸಿಡಿ ಸಂಸ್ಥಾಪಕರಿಗೆ ಆದಾಯ ಇಲಾಖೆ ಅಧಿಕಾರಿಗಳ ಕಿರುಕುಳ ಮತ್ತು ಉದ್ಯಮದಲ್ಲಿನ ನಷ್ಟದಿಂದ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ದುಡುಕಿನ ನಿರ್ಧಾರ ಕೈಗೊಂಡಿರುವ ಗುಮಾನಿಗಳಿಗೆ ಕಾರಣವಾಗಿದೆ.

37 ವರ್ಷಗಳ ಕಾಲ ಅತ್ಯಂತ ಪರಿಶ್ರಮದಿಂದ ರಾಜ್ಯಾದ್ಯಂತ ಕೆಫೆ ಕಾಫಿ ಡೇ ಹೈಟೆಕ್ ಶಾಪ್‍ಗಳನ್ನು ಆರಂಭಿಸಿ 30 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯ ರೂವಾರಿಯಾಗಿದ್ದ ಸಿದ್ಧಾರ್ಥ್ ತಮ್ಮ ಸಮೂಹ ಸಂಸ್ಥೆಗಳ ಮೂಲಕ ಇನ್ನೂ 20 ಸಾವಿರ ಮಂದಿಗೆ ನೌಕರಿ ಒದಗಿಸಿಸುವ ಉದ್ದೇಶ ಹೊಂದಿದ್ದರು.

ಆದರೆ, ಇತ್ತೀಚಿನ ದಿನಗಳಲ್ಲಿ ವ್ಯಾಪಾರ-ವಹಿವಾಟು ಕುಂಠಿತಗೊಂಡಿದ್ದರಿಂದ ಸಿದ್ಧಾರ್ಥ್ ತೀವ್ರ ಖಿನ್ನತೆಗೆ ಒಳಗಾಗಿದ್ದರು.ಅವರು ಬರೆದಿರುವ ಪತ್ರ ಇಂದು ಬೆಳಗ್ಗೆ ಮಾಧ್ಯಮಗಳಿಗೆ ಲಭಿಸಿದ್ದು, ಪತ್ರದಲ್ಲಿನ ಒಕ್ಕಣೆಗಳು ಹಲವಾರು ಸಂಶಯಗಳಿಗೆ ಎಡೆಮಾಡಿಕೊಟ್ಟಿವೆ.

ಸಂಸ್ಥೆಯನ್ನು ಅಪಾರ ಪರಿಶ್ರಮದಿಂದ ನಾನು ಮುನ್ನಡೆಸಿ ಬೆಳೆಸಿದೆ. ಆದರೆ, ಇತ್ತೀಚಿನ ಸನ್ನಿವೇಶಗಳು ನನ್ನ ಉದ್ಯಮ ಕುಸಿತಗೊಳ್ಳಲು ಕಾರಣವಾಗಿವೆ. ಇದನ್ನು ಪುನಶ್ಚೇತನಗೊಳಿಸಲು ನಾನು ನಡೆಸಿದ ಸತತ ಪ್ರಯತ್ನಗಳು ವಿಫಲವಾಗಿದ್ದು, ಉದ್ಯಮ ಲಾಭದಾಯಕವಾಗಿ ಮುನ್ನಡೆಯುವ ಲಕ್ಷಣಗಳು ಗೋಚರಿಸದಿರುವ ಬಗ್ಗೆ ನನಗೆ ಬೇಸರವಾಗಿದೆ ಎಂದು ಸಿದ್ಧಾರ್ಥ್ ನೊಂದು ನುಡಿದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಆದಾಯ ಇಲಾಖೆಯ ತನಿಖೆಯಿಂದ ತೀವ್ರ ಕಿರುಕುಳ ಎದುರಿಸಬೇಕಾಯಿತು.ಸಂಸ್ಥೆಗೆ ಸೇರಿದ್ದ ಕೆಲವು ಸ್ವತ್ತುಗಳು ಮತ್ತು ಷೇರುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಎಲ್ಲ ಬೆಳವಣಿಗೆಗಳು ನನಗೆ ತೀವ್ರ ಆಘಾತ ಉಂಟುಮಾಡಿವೆ. ಆದಾಯ ತೆರಿಗೆ ಇಲಾಖೆಯಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಮಹಾನಿರ್ದೇಶಕರು ವಿಪರೀತ ಕಿರುಕುಳ ನೀಡಿದ್ದಾರೆ ಎಂಬ ಸಂಗತಿಯನ್ನು ನಾನು ಈ ಸಂದರ್ಭದಲ್ಲಿ ನೊಂದು ಹೇಳಿದ್ದೇನೆ.

ನಾನು ತಮ್ಮಲ್ಲಿ (ಕೆಫೆ ಕಾಫಿ ಡೇ ನಿರ್ದೇಶಕರುಗಳು ಮತ್ತು ಸಿಬ್ಬಂದಿ) ಕಳಕಳಿಯಿಂದ ಮನವಿ ಮಾಡಿಕೊಳ್ಳುವುದೇನೆಂದರೆ ಈ ಉದ್ಯಮ ನಡೆಸಲು ನನ್ನಿಂದ ಸಾಧ್ಯವಿಲ್ಲ. ಆದ್ದರಿಂದ ಸಮರ್ಥರಾಗಿರುವ ನೀವು ಹೊಸ ಆಡಳಿತ ವ್ಯವಸ್ಥೆಯೊಂದಿಗೆ ಈ ಉದ್ಯಮವನ್ನು ಮುನ್ನಡೆಸಬೇಕು ಎಂದು ಕೋರುತ್ತಿದ್ದೇನೆ. ಈಗ ಆಗಿರುವ ಎಲ್ಲ ತಪ್ಪುಗಳು ಮತ್ತು ಲೋಪದೋಷಗಳಿಗೆ ಏಕೈಕ ಕಾರಣ ನಾನೇ. ಹಣಕಾಸು ದುಸ್ಥಿತಿಗಳಿಗೆ ನಾನೇ ಹೊಣೆಗಾರನಾಗಿದ್ದೇನೆ. ನನ್ನ ತಂಡ, ಲೆಕ್ಕಪರಿಶೋಧಕರು ಮತ್ತು ಆಡಳಿತ ಮಂಡಳಿಯ ಹಿರಿಯ ಸದಸ್ಯರಿಗೆ ನನ್ನ ವ್ಯವಹಾರ, ವಹಿವಾಟಿನ ಬಗ್ಗೆ ಏನೂ ತಿಳಿದಿಲ್ಲ. ಇದಕ್ಕೆ ಸಂಪೂರ್ಣ ನಾನೇ ಉತ್ತರದಾಯಿ. ಕಾನೂನು ಕ್ರಮ ಕೈಗೊಳ್ಳುವುದಾದರೆ ನನ್ನೊಬ್ಬನ ಮೇಲೆ ಮಾತ್ರ ಕ್ರಮ ಕೈಗೊಳ್ಳಬಹುದು.ನನ್ನ ಕುಟುಂಬದ ಸದಸ್ಯರು ಸೇರಿದಂತೆ ಪ್ರತಿಯೊಬ್ಬರಿಗೂ ನನ್ನ ಹಣಕಾಸು, ವ್ಯಾಪಾರ-ವಹಿವಾಟಿನ ಬಗ್ಗೆ ನಾನು ಮುಚ್ಚುಮರೆ ಮಾಡಿದ್ದೇನೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಸಿದ್ಧಾರ್ಥ್ ವಿವರಿಸಿದ್ದಾರೆ.

ಯಾರಿಗೂ ಮೋಸ, ದ್ರೋಹ ಅಥವಾ ವಂಚನೆ ಮಾಡುವುದು ಖಂಡಿತ ನನ್ನ ಉದ್ದೇಶವಲ್ಲ. ಯಶಸ್ವಿ ಉದ್ಯಮಿಯಾಗಿದ್ದ ನಾನು ಈಗ ಅದನ್ನು ಮುನ್ನಡೆಸಲು ಸಂಪೂರ್ಣ ವಿಫಲನಾಗಿದ್ದೇನೆ. ಇದು ನನ್ನ ಪ್ರಾಮಾಣಿಕ ಹೇಳಿಕೆ ಮತ್ತು ನಿವೇದನೆ. ನನ್ನ ಈ ಸಮಸ್ಯೆ ಮತ್ತು ಮನದಾಳದ ಹೇಳಿಕೆಗಳನ್ನು ನೀವೆಲ್ಲರೂ ಅರ್ಥ ಮಾಡಿಕೊಳ್ಳುತ್ತೀರ ಮತ್ತು ನನ್ನನ್ನು ಕ್ಷಮಿಸುತ್ತೀರ ಎಂಬ ಭರವಸೆ ನನ್ನಲ್ಲಿದೆ.

ನಾನು ನನ್ನ ಈ ಪತ್ರದೊಂದಿಗೆ ಪ್ರತಿಯೊಂದೂ ಸ್ವತ್ತು-ಆಸ್ತಿಯ ಎಲ್ಲ ಪಟ್ಟಿಗಳು ಮತ್ತು ಅದರ ಮೌಲ್ಯಗಳ ವಿವರಗಳನ್ನು ಲಗತ್ತಿಸಿದ್ದೇನೆ. ಈ ಕೆಳಗೆ ನಾನು ನಮೂದಿಸಿರುವ ನಮ್ಮ ಸ್ವತ್ತುಗಳ ಮೌಲ್ಯವು ಈಗ ನಾನು ಹೊಣೆಗಾರನಾಗಬೇಕಿರುವ ಮೌಲ್ಯಕ್ಕಿಂತಲೂ ಹೆಚ್ಚಿನದಾಗಿದೆ. ಹೀಗಾಗಿ ಪ್ರತಿಯೊಂದು ಬಾಕಿ ಮತ್ತು ಪಾವತಿಸಬೇಕಿರುವ ಮೊತ್ತಗಳನ್ನು ಮರು ಪಾವತಿಸಲು ಇದು ಸಹಕಾರಿಯಾಗುತ್ತದೆ ಎಂದು ಪತ್ರದಲ್ಲಿ ಸಿದ್ಧಾರ್ಥ್ ತಿಳಿಸಿದ್ದಾರೆ.

ಈ ಪತ್ರದ ಒಕ್ಕಣೆ ಬಹಿರಂಗವಾಗುತ್ತಿದ್ದಂತೆ ಕೆಫೆ ಕಾಫಿ ಡೇ ಸರಣಿ ಶಾಪ್‍ಗಳ ನೌಕರರು ಮತ್ತು ಉನ್ನತಾಧಿಕಾರಿಗಳಲ್ಲಿ ಆತಂಕ ಮನೆ ಮಾಡಿದ್ದು, ಸಿದ್ಧಾರ್ಥ್ ಸಮೂಹ ಸಂಸ್ಥೆಗಳ ಉದ್ಯೋಗಿಗಳನ್ನು ಚಿಂತೆಗೀಡುಮಾಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ