ಅತೃಪ್ತ ಶಾಸಕರ ಮನವೊಲಿಕೆ ಪ್ರಯತ್ನ ಮುಗಿದ ಅಧ್ಯಾಯ-ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

ತುಮಕೂರು, ಜು.27- ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿರುವ ಅತೃಪ್ತ ಶಾಸಕರ ಮನವೊಲಿಕೆ ಪ್ರಯತ್ನ ಮುಗಿದ ಅಧ್ಯಾಯ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಸಮೀಪದ ಗೊಲ್ಲಹಳ್ಳಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತೃಪ್ತ ಶಾಸಕರು ನಾವು ರಾಜೀನಾಮೆ ವಾಪಸ್ ಪಡೆದುಕೊಳ್ಳುವುದಿಲ್ಲ. ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಪದೇ ಪದೇ ಅವರನ್ನು ಒತ್ತಾಯ ಮಾಡುವುದು ಸರಿಯಲ್ಲ.

ಯಾವುದೇ ರೀತಿಯ ತೀರ್ಮಾನ ತೆಗೆದುಕೊಳ್ಳಲು ಅವರು ಸ್ವತಂತ್ರರು. ನಾನೂ ಸೇರಿದಂತೆ ಯಾರೇ ಆಗಲಿ ಅವರನ್ನು ಬಲವಂತ ಪಡಿಸುವುದು ಒಳ್ಳೆಯದಲ್ಲ.
ಈ ಮೊದಲು ನಡೆದ ಸಂಧಾನ ಪ್ರಕ್ರಿಯೆಗೆ ಅವರಿಂದ ಉತ್ತೇಜನಕಾರಿ ಉತ್ತರಗಳು ಸಿಕ್ಕಿಲ್ಲ. ಹೀಗಾಗಿ ಸಂಧಾನ ಪ್ರಕ್ರಿಯೆಯನ್ನು ನಿಲ್ಲಿಸುವುದು ಸೂಕ್ತ ಎಂದು ಹೇಳಿದರು.

ಅತೃಪ್ತರ ರಾಜೀನಾಮೆ ಅಂಗೀಕರಿಸುವುದು ಅಥವಾ ಬಿಡುವುದು ಸ್ಪೀಕರ್ ಅವರ ವಿವೇಚನೆಗೆ ಬಿಟ್ಟಿದ್ದು. ಪಕ್ಷಾಂತರ ನಿಷೇಧ ಕಾಯ್ದೆಯಡಿ ಕಾಂಗ್ರೆಸ್ ಸ್ಪೀಕರ್ ಅವರಿಗೆ ದೂರು ನೀಡಿದೆ. ಆ ದೂರು ಆಧರಿಸಿ ಶಾಸಕರ ಅನರ್ಹತೆಗೆ ಸ್ಪೀಕರ್ ಅವರು ಈಗಾಗಲೇ ವಿಚಾರಣೆ ಆರಂಭಿಸಿದ್ದಾರೆ. ಮೂರು ಮಂದಿ ಈಗಾಗಲೇ ಅನರ್ಹಗೊಂಡಿದ್ದಾರೆ. ಉಳಿದವರ ಕುರಿತು ಶೀಘ್ರವೇ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸವಿದೆ ಎಂದು ಹೇಳಿದರು.

ಬಿಜೆಪಿ ಇದೇ ಮೊದಲ ಬಾರಿಗೆ ಹೊಸ ರೀತಿಯ ಕೆಟ್ಟ ರಾಜಕಾರಣವನ್ನು ಹುಟ್ಟುಹಾಕಿದೆ. ಆಡಳಿತ ಪಕ್ಷದ ಶಾಸಕರಿಗೆ ಆಮಿಷ ತೋರಿಸಿ ರಾಜೀನಾಮೆ ಕೊಡಿಸಿ ಸರ್ಕಾರ ವಿಶ್ವಾಸಮತದಲ್ಲಿ ಸೋಲುವಂತೆ ಮಾಡಿದೆ. ಇದು ಅತ್ಯಂತ ನೋವಿನ ಸಂಗತಿ. ಪ್ರಜಾಪ್ರಭುತ್ವದಲ್ಲಿ ಖಂಡನೀಯವಾದ ಬೆಳವಣಿಗೆ. ಇಂತಹ ಕೆಟ್ಟ ವಾತಾವರಣ ನಿರ್ಮಿಸಿದ್ದಕ್ಕಾಗಿ ಬಿಜೆಪಿಗೆ ಜನ ಪಾಠ ಕಲಿಸುತ್ತಾರೆ. ರಾಜಕೀಯ ಬೆಳವಣಿಗೆಗಳು ಏನೇ ಇದ್ದರೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ. ಗೊಂದಲಗಳ ನಡುವೆ ಅವರು ಹೇಗೆ ಆಡಳಿತ ಮಾಡುತ್ತಾರೆ ಎಂಬುದನ್ನು ಕಾದು ನೋಡುತ್ತೇವೆ ಎಂದರು.

ಸದ್ಯದ ಪರಿಸ್ಥಿತಿಯಲ್ಲಿ ಮುಂದಿನ ಎಂಟು ತಿಂಗಳ ಕಾಲಕ್ಕೆ ಹಣಕಾಸು ಮಸೂದೆಗೆ ತಕ್ಷಣ ಅಂಗೀಕಾರ ಪಡೆದುಕೊಳ್ಳಬೇಕಿದೆ. ಸಂಖ್ಯಾಬಲದ ಆಧಾರದ ಮೇಲೆ ಮಸೂದೆ ಅಂಗೀಕಾರಗೊಳ್ಳುವ ನಿರೀಕ್ಷೆಗಳಿವೆ ಎಂದು ತಿಳಿಸಿದರು.

ಒಂದು ಸರ್ಕಾರ ಅಧಿಕಾರಕ್ಕೆ ಬರಬೇಕಾದರೆ 113 ಶಾಸಕರ ಮ್ಯಾಜಿಕ್ ನಂಬರ್ ಬೇಕು. ಈಗಾಗಲೇ ಮೂರು ಮಂದಿ ಶಾಸಕರು ಅನರ್ಹಗೊಂಡಿರುವುದರಿಂದ ಮ್ಯಾಜಿಕ್ ನಂಬರ್‍ನಲ್ಲಿ ಇಳಿಕೆಯಾಗಬಹುದು. ಯಡಿಯೂರಪ್ಪನವರು ಯಾವ ರೀತಿ ಬಹುಮತ ಸಾಬೀತುಪಡಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದರು.

ಸ್ಪೀಕರ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಏಕಾಏಕಿ ಸಾಧ್ಯವಿಲ್ಲ. 14 ದಿನಗಳ ಮೊದಲು ಪೂರ್ವಭಾವಿಯಾಗಿ ನೋಟಿಸ್ ನೀಡಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ