ಇಂದು ಸಿಎಲ್​ಪಿ ಸಭೆ; ಕಾಂಗ್ರೆಸ್​ನ ಎಲ್ಲ ಶಾಸಕರ ಕಡ್ಡಾಯ ಹಾಜರಾತಿಗೆ ಸಿದ್ದರಾಮಯ್ಯ ಸೂಚನೆ

ಬೆಂಗಳೂರು: ಮೂರು ದಿನಗಳ ಹಿಂದೆಯೇ ವಿಶ್ವಾಸಮತ ಯಾಚನೆಗೆ ಹಿಂದೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸ್ಪೀಕರ್ ರಮೇಶ್ ಕುಮಾರ್ಸಮಯ ನಿಗದಿ ಮಾಡಿದ್ದರು. ಆದರೆ, 2 ದಿನಗಳು ಚರ್ಚೆ, ಗಲಾಟೆಗದ್ದಲಗಳಲ್ಲೇ ಅಧಿವೇಶನ ಮುಗಿದುಹೋಯಿತು. ಇದರ ನಡುವೆ ರಾಜ್ಯಪಾಲರು ಮಧ್ಯಪ್ರವೇಶಿಸಿ ಗಡುವು ನೀಡಿದ್ದೂ ಆಯಿತು. ಆದರೆ, ಅದರಿಂದಲೂ ಯಾವುದೇ ಪ್ರಯೋಜನವಾಗಲಿಲ್ಲನಾಳೆ ಸಿಎಂ ವಿಶ್ವಾಸ ಮತಯಾಚನೆ ಮಾಡುವ ಸಾಧ್ಯತೆ ಇರುವುದರಿಂದ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಎಲ್ಲ ಶಾಸಕರ ಸಭೆ ಕರೆದಿದ್ದಾರೆ.

ಕಾಂಗ್ರೆಸ್​ನ ಶಾಸಕರು ತಂಗಿರುವ ತಾಜ್ ವಿವಾಂತಾ ಹೋಟೆಲ್​ನಲ್ಲೇ ಇಂದು ಬೆಳಗ್ಗೆ ಸಭೆ ನಡೆಯಲಿದೆ. ಈ ಸಭೆಗೆ ಎಲ್ಲ ಶಾಸಕರು ಕಡ್ಡಾಯವಾಗಿ ಹಾಜರಿರುವಂತೆ ಸೂಚನೆ ನೀಡಲಾಗಿದೆ. ಸಭೆಯಲ್ಲಿ ನಾಳೆ ನಡೆಯಲಿರುವ ಅಧಿವೇಶನದಲ್ಲಿ ಏನು ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ. ಈಗಾಗಲೇ ನಿನ್ನೆ ಸುಮಾರು 30 ಕಾಂಗ್ರೆಸ್ ನಾಯಕರ ಜೊತೆ ಸಿದ್ದರಾಮಯ್ಯ ಸಭೆ ನಡೆಸಿದ್ದಾರೆ.
ನಿನ್ನೆಯಷ್ಟೇ ಕಾಂಗ್ರೆಸ್​- ಜೆಡಿಎಸ್​ ನಾಯಕರ ವಿರುದ್ಧ ಕಿಡಿಕಾರಿದ್ದ ಬಿಜೆಪಿ ಶಾಸಕ ಸಿ.ಟಿ. ರವಿ, ಸೋಮವಾರವೂ ಕಾಲಹರಣ ಮಾಡಿ ಕಲಾಪ ಮುಂದೂಡುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ. ಮುಖ್ಯಮಂತ್ರಿಗಳೇ ಸೋಮವಾರ ವಿಶ್ವಾಸ ಮತಯಾಚನೆ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ. ಈಗಾಗಲೇ ಸದನದ 2 ಕಲಾಪಗಳಲ್ಲಿ ಕಾಲಹರಣ ಮಾಡಿದ್ದಾರೆ. ಇನ್ನು ಈ ರೀತಿಯ ವಿಳಂಬ ಧೋರಣೆಯನ್ನು ನಾವು ಸಹಿಸುವುದಿಲ್ಲ ಎಂದಿದ್ದರು. ಹೀಗಾಗಿ, ಇಂದು ನಡೆಯುವ ಕಾಂಗ್ರೆಸ್​ ಶಾಸಕರ ಸಭೆಯಲ್ಲಿ ಯಾವ ವಿಚಾರಗಳು ಚರ್ಚೆಯಾಗುತ್ತವೆ ಎಂಬುದು ಮಹತ್ವ ಪಡೆದುಕೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ