ಬೆಂಗಳೂರು; ಸ್ಪೀಕರ್ ರಮೇಶ್ ಕುಮಾರ್ ಅವರು ಈಗಲಾದರೂ ಕಾನೂನುಬದ್ಧವಾಗಿ ಕೆಲಸ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಾಕೀತು ಮಾಡಿದ್ದಾರೆ.
ರಾಜ್ಯದ ಮೈತ್ರಿ ಸರ್ಕಾರ ತಾಂತ್ರಿಕವಾಗಿ ಬಹುಮತ ಕಳೆದುಕೊಂಡಿರುವ ಪರಿಣಾಮ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿಯ 105 ಶಾಸಕರು ವಿಧಾನಸೌಧದ ಗಾಂಧಿ ಚೌಕದ ಎದುರು ಧರಣಿ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಯಡಿಯೂರಪ್ಪ, “ಎಲ್ಲಾ ಪಕ್ಷದವರೂ ಸರ್ವಾನುಮತದಿಂದ ಕೆ.ಆರ್. ರಮೇಶ್ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಿದ್ದೇವೆ. ಆದರೆ, ಅವರು ಕಾನೂನುಬದ್ಧವಾಗಿ ಕೆಲಸ ಮಾಡುತ್ತಿಲ್ಲ. ಅತೃಪ್ತ ಶಾಸಕರ ರಾಜೀನಾಮೆಯನ್ನು ಅಂಗೀಕರಿಸಲು ವಿಳಂಬ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಕ್ರಮಬದ್ಧವಲ್ಲದ ರಾಜೀನಾಮೆ ನೀಡಿದವರು ಮತ್ತೊಮ್ಮೆ ಬಂದು ಸರಿಯಾದ ಮಾದರಿಯಲ್ಲಿ ರಾಜೀನಾಮೆ ಸಲ್ಲಿಸುತ್ತಾರೆ. ಆದರೆ, ರಾಜೀನಾಮೆಗಳು ಕ್ರಮಬದ್ಧವಾಗಿದೆ ಎಂದು ಅವರೇ ಹೇಳಿರುವ ರಾಜೀನಾಮೆಗಳನ್ನಾದರೂ ಕೂಡಲೇ ಕಾನೂನು ಬದ್ಧಬವಾಗಿ ಅಂಗೀಕಾರ ಮಾಡಲಿ” ಎಂದು ತಾಕೀತು ಮಾಡಿದ್ದಾರೆ.
“ಕುಮಾರಸ್ವಾಮಿ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪಕ್ಷದ 105 ಶಾಸಕರು ಇಂದು ಧರಣಿ ಕುಳಿತಿದ್ದೇವೆ. ಮಧ್ಯಾಹ್ನ 3 ಗಂಟೆಗೆ ಸ್ಪೀಕರ್ ಅವರ ಭೇಟಿಗೆ ಸಮಯ ಕೋರಿದ್ಧೇವೆ. ಅಷ್ಟರೊಳಗೆ ರಾಜ್ಯಪಾಲರನ್ನೂ ಭೇಟಿ ಮಾಡಿ ಮಾತುಕತೆ ನಡೆಸಲಿದ್ದೇವೆ. ನಂತರ ಬಿಜೆಪಿ ಪಕ್ಷದ ಮುಂದಿನ ಹೋರಾಟದ ರೂಪುರೇಷೆಯನ್ನು ಸಿದ್ಧಪಡಿಸಲಿದ್ದೇವೆ” ಎಂದು ತಿಳಿಸಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್ ನಿನ್ನೆ ಸಚಿವ ಕೃಷ್ಣಭೈರೇಗೌಡ ಸೇರಿದಂತೆ ಇತರೆ ಸಚಿವರ ಜೊತೆಗೆ ಮಾಜಿ ಅಡ್ವೊಕೇಟ್ ಜನರಲ್ ರವಿವರ್ಮ ಕುಮಾರ್ ಅವರನ್ನು ಭೇಟಿ ಮಾಡಿದ್ದು ರಾಜ್ಯ ರಾಜಕೀಯ ವಲಯದಲ್ಲಿ ದೊಡ್ಡ ಸುದ್ದಿಯಾಗಿತ್ತು. ಈ ಕುರಿತು ಮಾತನಾಡಿದ ಯಡಿಯೂರಪ್ಪ, “ಸ್ಪೀಕರ್ ಅವರು ರವಿವರ್ಮ ಅವರನ್ನು ತಮ್ಮ ಕಚೇರಿಗೆ ಕರೆಸಿಕೊಳ್ಳಬಹುದಿತ್ತು. ಆದರೆ, ಸಚಿವರ ಜೊತೆಗೆ ಅವರನ್ನು ಭೇಟಿ ಮಾಡಿದ್ದು ಸರಿಯಲ್ಲ. ಈ ಕುರಿತು ಅವರೇ ಸ್ಪಷ್ಟನೆ ನೀಡಬೇಕು” ಎಂದಿದ್ದಾರೆ.
ಡಿ.ಕೆ. ಶಿವಕುಮಾರ್ ವಿರುದ್ಧ ಕೆಂಡ ಕಾರಿದ ಯಡಿಯೂರಪ್ಪ, “ಅತೃಪ್ತ ಶಾಸಕರನ್ನು ಮುಂಬೈ ತೆರಳಿ ಭೇಟಿ ಮಾಡುವುದು ಮಾತುಕತೆ ನಡೆಸುವುದು ಡಿ.ಕೆ. ಶಿವಕುಮಾರ್ ಹಾಗೂ ಅವರ ಪಕ್ಷದ ಶಾಸಕರ ನಡುವಿನ ವಿಚಾರ ಈ ಕುರಿತು ನಮ್ಮ ತಕರಾರಿಲ್ಲ. ಆದರೆ, ಸ್ಪೀಕರ್ ಕಚೇರಿಯ ಒಳಗೆ ನುಗ್ಗಿ ರಾಜೀನಾಮೆಯನ್ನು ಹರಿದುಹಾಕುವುದು ಎಷ್ಟು ಸರಿ. ಈ ಕುರಿತು ಸ್ಪೀಕರ್ ಈವರೆಗೆ ಏಕೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ” ಎಂದು ಪ್ರಶ್ನಿಸಿದ್ದಾರೆ.