ನಾನಿರೊದೇ ಸ್ಲಂನಲ್ಲಿ, ಸುಗಂಧದ ಪರಿಮಳ ಬರಬೇಕು ಅಂದ್ರೆ ಆಗುತ್ತಾ: ಸ್ಪೀಕರ್ ರಮೇಶ್ ಕುಮಾರ್

ಬೆಂಗಳೂರು: ಕೊಳಚೆ ಪ್ರದೇಶದಲ್ಲಿ ವಾಸ ಮಾಡುವವರಿಗೆ ಇಲ್ಲಿ ದುರ್ವಾಸನೆ ಇದೆ ಎಂದರೆ ಹೇಗಾಗುತ್ತದೆ. ನಾನಿರುವುದೇ ಸ್ಲಂನಲ್ಲಿ. ಹೀಗಾಗಿ ಸ್ಲಂನಲ್ಲಿ ಇದ್ದುಕೊಂಡು ಸುಗಂಧದ ಪರಿಮಳ ಬರಬೇಕು ಎಂದರೆ ಆಗುತ್ತಾ ಎಂದು ರಾಜ್ಯ ರಾಜಕೀಯದ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ನನ್ನ ಸ್ಥಾನದಲ್ಲಿ ನಾನು ಹೇಗೆ ವರ್ತಿಸಬೇಕು. ಜನರು ಏನು ನಿರೀಕ್ಷೆ ಮಾಡುತ್ತಾರೆ, ಸಂವಿಧಾನ ಏನು ನಿರೀಕ್ಷೆ ಮಾಡುತ್ತೆ ಇಷ್ಟಕ್ಕೆ ನಾನು ಸೀಮಿತವಾಗಿರುತ್ತೇನೆ. ಸದ್ಯಕ್ಕೆ ಯಾವ ಶಾಸಕರು ಸಮಯ ಕೇಳಿಲ್ಲ. ಜನರ ಭಾವನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

ಜನರಿಗೆ ವೋಟು ಹಾಕುವ ಹಕ್ಕು ಕೊಟ್ಟಿದ್ದೇವೆ. ಆದ್ದರಿಂದ ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿಲ್ಲ ಎಂದರೆ ಸಾಕಪ್ಪ ನಿಮ್ಮ ಕೆಲಸ ಎಂದು ಹೇಳುತ್ತಾರೆ. ಶಾಸಕರ ರಾಜೀನಾಮೆಯಿಂದ ನನಗೆ ಬೇಸರವಾಗುವುದಿಲ್ಲ. ಕೊಳಚೆ ಪ್ರದೇಶದಲ್ಲಿ ವಾಸ ಮಾಡುವವರಿಗೆ ಇಲ್ಲಿ ದುರ್ವಾಸನೆ ಇದೆ ಎಂದರೆ ಹೇಗಾಗುತ್ತದೆ. ನಾನಿರುವುದೇ ಸ್ಲಂನಲ್ಲಿ, ಹೀಗಾಗಿ ಸ್ಲಂನಲ್ಲಿ ಇದ್ದುಕೊಂಡು ಸುಗಂಧದ ಪರಿಮಳ ಬರಬೇಕು ಎಂದರೆ ಆಗುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.

ನಮ್ಮ ಕಾರ್ಯದರ್ಶಿ ಅವರು ರಾಜೀನಾಮೆಯಲ್ಲಿ ತೆಗೆದುಕೊಂಡಿದ್ದಾರೆ. ನಾನು ಹೋಗಿ ನೋಡಿದ ನಂತರ ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ. ಮೊದಲು ತಾಳಿಕಟ್ಟುವುದು, ಜೀರಿಗೆ, ಬೆಲ್ಲ ಇಡುವುದು ಬಹಳ ಮುಖ್ಯವಾಗಿತ್ತು. ಜನರು ಅಕ್ಷತೆ ಹಾಕಲು ಕಾಯುತ್ತಿದ್ದರು. ಈಗ ಹುಡುಗ ತಾಳಿ ಕಟ್ಟಿದ್ದಾನಾ ಎಂದು ನೋಡುವುದಿಲ್ಲ. ಬರೀ ವೈಭವದ ರೀತಿಯಾಗಿದೆ ಎಂದು ರಾಜಕೀಯದ ಬೆಳವಣಿಗೆ ಬಗ್ಗೆ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ