ಅತೃಪ್ತ ಶಾಸಕರ ಮೇಲೆ ಪಕ್ಷಾಂತರ ಕಾಯ್ದೆ ಪರಿಚ್ಚೇದ 10?

ಬೆಂಗಳೂರು, ಜು.9-ಪಕ್ಷಾಂತರ ನಿಷೇಧ ಕಾಯ್ದೆಯ ಪರಿಚ್ಛೇದ 10 ಹಲ್ಲಿಲ್ಲದ ಹಾವು ಎಂದು ವ್ಯಾಖ್ಯಾನಿಸಲಾಗಿದ್ದರೂ ಕಾಂಗ್ರೆಸ್ ಮತ್ತೆ ಅದೇ ಅಸ್ತ್ರವನ್ನು ಅತೃಪ್ತ ಶಾಸಕರ ಮೇಲೆ ಪ್ರಯೋಗ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ಮೊದಲು ಬಿಜೆಪಿ ಆಪರೇಷನ್ ಕಮಲಕ್ಕೆ ಒಳಗಾಗಿ ಶಾಸಕರಾದ ರಮೇಶ್ ಜಾರಕಿಹೊಳಿ, ಉಮೇಶ್ ಜಾಧವ್, ಮಹೇಶ್ ಕಮಟಳ್ಳಿ ಮತ್ತು ನಾಗೇಂದ್ರ ಅವರು ಕಾಂಗ್ರೆಸ್ ಶಾಸಕಾಂಗ ಸಭೆ ಮತ್ತು ವಿಧಾನಮಂಡಲದ ಅಧಿವೇಶನಕ್ಕೆ ಗೈರು ಹಾಜರಾಗಿದ್ದರು. ಆ ಸಂದರ್ಭದಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಈ ನಾಲ್ಕು ಮಂದಿ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಪರಿಚ್ಛೇದ 10ರಡಿ ಕ್ರಮ ಕೈಗೊಳ್ಳುವಂತೆ ಸ್ಪೀಕರ್ ಅವರಿಗೆ ದೂರು ನೀಡಿದ್ದರು.

ಸ್ವಲ್ಪ ದಿನಗಳಲ್ಲೇ ಕಲಬುರ್ಗಿ ಜಿಲ್ಲೆ ಚಿಂಚೊಳಿ ಕ್ಷೇತ್ರದ ಶಾಸಕ ಉಮೇಶ್ ಜಾಧವ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಲ್ಲದೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದರು. ಆ ಸಂದರ್ಭದಲ್ಲಿ ಏಕಾಏಕಿ ರಾಜೀನಾಮೆ ಅಂಗೀಕರಿಸದ ಸ್ಪೀಕರ್ ಅವರು ಸಾರ್ವಜನಿಕರಿಂದ ಅಹವಾಲುಗಳನ್ನು ಆಲಿಸಿದ್ದರು.

ಅಹವಾಲು ಸ್ವೀಕರಣೆಯ ವೇಳೆ ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳಿದ ಸ್ಪೀಕರ್‍ಅವರು ಪರಿಚ್ಛೇದ 10 ಕಾಯ್ದೆ ದುರ್ಬಲವಾಗಿದೆ. ಅದರಡಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಬಹುದು. ಆದರೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಅದರಂತೆ ಉಮೇಶ್‍ಜಾಧವ್ ಅವರ ರಾಜೀನಾಮೆ ಅಂಗೀಕಾರವಾಯಿತು. ಚುನಾವಣೆಯಲ್ಲಿ ಸ್ಪರ್ಧಿಸಿದರು.

ಆ ಸಂದರ್ಭದಲ್ಲಿ ಸ್ಪೀಕರ್ ಅವರು ಹೇಳಿದ ಅಭಿಪ್ರಾಯ ಈಗ ಚರ್ಚೆಗೆ ಗ್ರಾಸವಾಗಿದೆ. ಉಮೇಶ್ ಜಾಧವ್ ಕಾಂಗ್ರೆಸ್ ತೊರೆದು ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸಲು ಮುಂದಾಗಿದ್ದರು. ಒಂದು ವೇಳೆ ಉಮೇಶ್ ಜಾಧವ್ ಅವರನ್ನು ಅನರ್ಹಗೊಳಿಸಿದ್ದರೆ ಲೋಕಸಭೆ ಚುನಾವಣೆಯಲ್ಲಿ ಅವರು ಸ್ಪರ್ಧಿಸುವುದನ್ನು ತಡೆಯಬಹುದಾಗಿತ್ತು. ಆ ಸಂದರ್ಭದಲ್ಲಿ ಸ್ಪೀಕರ್ ಅವರು ನನಗೆ ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಮಾತ್ರ ಅಧಿಕಾರವಿದೆ. ಚುನಾವಣೆ ಸ್ಪರ್ಧೆಯಿಂದ ನಿಷೇಧಿಸಬೇಕಾದರೆ ಹೈಕೋರ್ಟ್‍ನಲ್ಲಿ ಧಾವೆ ಹೂಡಬೇಕು.ನ್ಯಾಯಾಲಯ ಆದೇಶ ಹೊರಡಿಸಬೇಕು ಎಂದಿದ್ದರು.

ಅನಿರೀಕ್ಷಿತ ಬೆಳವಣಿಗೆಯಲ್ಲಿ ಉಮೇಶ್ ಜಾಧವ್ ಅವರ ರಾಜೀನಾಮೆ ಅಂಗೀಕಾರವಾಯಿತು, ನಂತರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಸೋಲಿಸಿದರು.

ಇಂದು ಕಾಂಗ್ರೆಸ್ ಶಾಸಕಾಂಗ ಸಭೆ ಬಳಿಕ ಅತೃಪ್ತ ಶಾಸಕರ ವಿರುದ್ಧ ಮತ್ತೆ ಅದೇ ಪಕ್ಷಾಂತರ ನಿಷೇಧ ಕಾಯ್ದೆಯಡಿ ದೂರು ನೀಡಲಾಗಿದೆ. ಒಂದು ವೇಳೆ ಆಗ ಇಲ್ಲದೇ ಇರುವ ಅಧಿಕಾರಿಗಳು ಈಗ ಹೊಸದಾಗಿ ಹುಟ್ಟಿಕೊಳ್ಳಲು ಎಲ್ಲಿಂದ ಸಾಧ್ಯ ಎಂಬ ಚರ್ಚೆಗಳಾಗುತ್ತಿವೆ.

ಕಾಂಗ್ರೆಸ್‍ನ ಕೆಲವು ನಾಯಕರ ಪ್ರಕಾರ ಸ್ಪೀಕರ್ ಅವರಿಗೆ ಪರಿಚ್ಛೇದ 10ನ್ನು ಜಾರಿ ಮಾಡುವ ಪರಮಾಧಿಕಾರ ಇದೆ ಎಂದು ಹೆಳಲಾಗುತ್ತಿದೆ.

ಆ ಅಧಿಕಾರ ಇದ್ದದ್ದೇ ಆಗಿದ್ದರೆ ಉಮೇಶ್ ಜಾಧವ್ ವಿರುದ್ಧ್ ಬಳಸದೆ ಅವರನ್ನು ಬಿಜೆಪಿಗೆ ಸುಲಭವಾಗಿ ಬಿಟ್ಟಿದ್ದೇಕೆ ಎಂಬ ಪ್ರಶ್ನೆ ಕಾಡಲಾರಂಭಿಸಿದೆ.

ಕಾಂಗ್ರೆಸ್‍ನ ಉನ್ನತ ನಾಯಕರ ಪ್ರಕಾರ ಆ ಸಂದರ್ಭದಲ್ಲಿ ಉಮೇಶ್ ಜಾಧವ್ ವಿರದ್ಧ ಕ್ರಮ ಕೈಗೊಳ್ಳದೆ ರಾಜೀನಾಮೆ ಅಂಗೀಕರಿಸುವಂತೆ ಕಾಂಗ್ರೆಸಿಗರೇ ಮನವಿ ಮಾಡಿದ್ದರು ಎನ್ನಲಾಗಿದೆ.

ಆಗೆಲ್ಲಾ ಬಳಕೆಯಾಗದ ಕಾನೂನು ಈಗ ಎಷ್ಟರ ಮಟ್ಟಿಗೆ ಸಮರ್ಥವಾಗಿ ಬಳಕೆಯಾಗುತ್ತದೆ.ಸಮ್ಮಿಶ್ರ ಸರ್ಕಾರವನ್ನು ಹೇಗೆ ರಕ್ಷಣೆ ಮಾಡುತ್ತದೆ ಎಂಬ ಕುತೂಹಲಗಳನ್ನು ಹುಟ್ಟುಹಾಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ