ರಾಜೀನಾಮೆ ಕೊಟ್ರು ರಾಮಲಿಂಗಾ ರೆಡ್ಡಿ ವಿರುದ್ಧ ಕ್ರಮ ಇಲ್ಲ; ದಿನೇಶ್ ಗುಂಡೂರಾವ್ ಸ್ಪಷ್ಟನೆ

ಬೆಂಗಳೂರು; ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ರಾಮಲಿಂಗಾ ರೆಡ್ಡಿ ವಿರುದ್ಧ ಪಕ್ಷ ಯಾವುದೇ ಕ್ರಮ ಜರುಗಿಸುವುದಿಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದ 13 ಜನ ಶಾಸಕರು ಈಗಾಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಪೈಕಿ ಶಾಸಕ ರಾಮಲಿಂಗಾ ರೆಡ್ಡಿ ಸಹ ಒಬ್ಬರು. ಹೀಗಾಗಿ ರಾಜೀನಾಮೆ ನೀಡಿರುವ ಅತೃಪ್ತರ ವಿರುದ್ಧ ಕಾನೂನು ಕ್ರಮ ಜರುಗಿಸಲು ಹಾಗೂ ‘ಪಕ್ಷಾಂತರ ನಿಷೇಧ ಕಾಯ್ದೆ’ಯ ಅಡಿಯಲ್ಲಿ ಅವರ ಶಾಸಕ ಸ್ಥಾನವನ್ನು ಅನೂರ್ಜಿತಗೊಳಿಸಲು ಕಾಂಗ್ರೆಸ್ ಚಿಂತನೆ ನಡೆಸುತ್ತಿದೆ. ಆದರೆ, ರಾಮಲಿಂಗಾ ರೆಡ್ಡಿಯ ವಿರುದ್ಧ ಮಾತ್ರ ಯಾವುದೇ ಕ್ರಮ ಜರುಗಿಸದಿರಲು ನಿರ್ಧರಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಈ ಕುರಿತು ಮಂಗಳವಾರ ಮಾಧ್ಯಮದ ಎದುರು ಮಾಹಿತಿ ನೀಡಿದ ಅವರು, “ರಾಮಲಿಂಗಾ ರೆಡ್ಡಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ, ಅವರು ಪಕ್ಷದ ವಿರುದ್ಧ ಮಾತನಾಡಿಲ್ಲ. ಇತರರಂತೆ ಬಿಜೆಪಿಯ ಸೌಲಭ್ಯ ಪಡೆದು ಮುಂಬೈಗೆ ಹಾರಲಿಲ್ಲ, ಅಥವಾ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸಕ್ಕೆ ಮುಂದಾಗಲಿಲ್ಲ ಹೀಗಾಗಿ ಅವರ ವಿರುದ್ಧ ಯಾವುದೇ ಕ್ರಮ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ರಾಜೀನಾಮೆ ನೀಡಿರುವ ಶಾಸಕರ ಕುರಿತು ಮಾತನಾಡಿರುವ ಅವರು, “ಸರ್ಕಾರವನ್ನು ಉರುಳಿಸಲು ಅತೃಪ್ತ ಶಾಸಕರು ರಾಜೀನಾಮೆ ನೀಡಿದರೂ, ಸರ್ಕಾರವನ್ನು ಉಳಿಸಿಕೊಳ್ಳಲು ನಮ್ಮ ಬಳಿ ಪರ್ಯಾಯ ಪ್ಲಾನ್ ಇದೆ” ಎಂದು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ