ರೋಷನ್ ಬೇಗ್ ರಾಜೀನಾಮೆಯಿಂದ 103ಕ್ಕೆ ಇಳಿದ ದೋಸ್ತಿಗಳ ಬಲಾಬಲ

ಬೆಂಗಳೂರು,ಜು.9- ಸಮ್ಮಿಶ್ರ ಸರ್ಕಾರದ ಭವಿಷ್ಯ ಡೋಲಾಯಮಾನ ವಾಗಿರುವಾಗಲೇ ಅಲ್ಪಸಂಖ್ಯಾತ ಸಮುದಾಯದ ಮುಖಂಡ, ಮಾಜಿ ಸಚಿವ ಹಾಗೂ ಶಿವಾಜಿನಗರದ ಶಾಸಕ ರೋಷನ್‍ಬೇಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇದರಿಂದಾಗಿ ಕಾಂಗ್ರೆಸ್‍ನ 11ನೇ ವಿಕೆಟ್ ಪತನವಾಗಿದ್ದು, ದೋಸ್ತಿಗಳ ಬಲಾಬಲ 103ಕ್ಕೆ ಇಳಿದಿರುವುದರಿಂದ ಮೈತ್ರಿ ಸರ್ಕಾರ ದಿನದಿಂದ ದಿನಕ್ಕೆ ಅಲ್ಪಮತಕ್ಕೆ ಕುಸಿಯುತ್ತಿದೆ.

ಈಗಾಗಲೇ ನಿಗದಿಯಾಗಿದ್ದಂತೆ ವಿಧಾನಸಭೆಯ ಸ್ಪೀಕರ್ ರಮೇಶ್‍ಕುಮಾರ್ ಅವರ ಕಚೇರಿಗೆ ಆಗಮಿಸಿದ ರೋಷನ್ ಬೇಗ್ ಖುದ್ದು ಭೇಟಿಯಾಗಿ ರಾಜೀನಾಮೆ ಪತ್ರವನ್ನು ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ವಿಧಾನಸಭೆ ಸಭಾಧ್ಯಕ್ಷ ರಮೇಶ್‍ಕುಮಾರ್ ಅವರನ್ನು ಇಂದು ಭೇಟಿಯಾಗಿ ರಾಜೀನಾಮೆಪತ್ರ ಕೊಟ್ಟಿದ್ದೇನೆ ಎಂದು ಹೇಳಿದರು.

ನಾನು ಸತ್ಯ ಹೇಳಿದ್ದಕ್ಕೆ ನನ್ನನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು. ನಾನು ಮುಂಬೈ, ಗೋವಾ ಎಲ್ಲಿಗೂ ಹೋಗುವುದಿಲ್ಲ. ಹಜ್ ಕಮಿಟಿ ಅಧ್ಯಕ್ಷನಾಗಿ ಏನು ಮಾಡಬೇಕೋ ಅದನ್ನು ಮಾಡುತ್ತಿದ್ದೇನೆ ಎಂದು ಹೇಳಿದರು.

ಇಂದು ನಾನು ನನ್ನ ಮಗ ಹಜ್ ಯಾತ್ರೆಗೆ ಹೋಗುತ್ತಿದ್ದೇವೆ. ಉಳಿದ ವಿಷಯಗಳ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನಿಮ್ಮನ್ನು ಸ್ಪೀಕರ್ ಕಚೇರಿಯಲ್ಲಿದ್ದ ಸಚಿವರಾದ ಕೃಷ್ಣೇಭೆರೇಗೌಡ, ಕೆ.ಜೆ.ಜಾರ್ಜ್, ಶಾಸಕ ಎನ್.ಎ.ಹ್ಯಾರೀಸ್, ವಿಧಾನಪರಿಷತ್ ಸದಸ್ಯ ರಿಜ್ವಾನ್ ಮನವೊಲಿಸುವ ಪ್ರಯತ್ನ ಮಾಡಿದರೆ? ಎಂಬ ಮಾಧ್ಯಮದವರ ಪ್ರಶ್ನೆಗೆ, ಸದ್ಯಕ್ಕೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದಷ್ಟೇ ಹೇಳಿ ಕೈ ಮುಗಿದು ನಿರ್ಗಮಿಸಿದರು.

ಕೆಲ ದಿನಗಳ ಹಿಂದೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್,ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ದ ರೋಷನ್ ಬೇಗ್ ಟೀಕಾ ಪ್ರಹಾರ ನಡೆಸಿದ್ದರು.

ಪಕ್ಷದ ಸೋಲಿಗೆ ಕಾರಣರಾದವರ ಮೇಲೆ ಹೈಕಮಾಂಡ್ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್‍ಗೆ ಉಳಿಗಾಲವಿಲ್ಲ ಎಂದು ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಪಕ್ಷದ ಶಿಸ್ತು ಉಲ್ಲಂಘಿಸಿದ ಕಾರಣಕ್ಕಾಗಿ ರೋಷನ್ ಬೇಗ್ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ನೋಟಿಸ್‍ಗೆ ನಾನು ಉತ್ತರ ನೀಡುವುದಿಲ್ಲ ಎಂದು ತಿರುಗೇಟು ನೀಡಿದ್ದರು.

ಹೀಗಾಗಿ ರೋಷನ್ ಬೇಗ್ ಅವರನ್ನು ಶಿಸ್ತು ಉಲ್ಲಂಘನೆ ಆರೋಪದಲ್ಲಿ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ಇತ್ತೀಚೆಗೆ ಹೊರಬಂದ ಐಎಂಎ ಪ್ರಕರಣದಲ್ಲಿ ಇವರ ಹೆಸರು ಕೇಳಿಬಂದಿತ್ತು. ಐಎಂಎ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್ ಆಡಿಯೋದಲ್ಲಿ ಇವರ ಹೆಸರನ್ನು ಬಹಿರಂಗಪಡಿಸಿದ್ದ. ಹೀಗಾಗಿ ಕಾಂಗ್ರೆಸ್ ರೋಷನ್ ಬಗ್ಗೆ ಅವರಿಂದ ಅಂತರ ಕಾಯ್ದುಕೊಂಡಿತ್ತು. ಮೂಲಗಳ ಪ್ರಕಾರ ರೋಷನ್ ಬೇಗ್ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ