ಮೊದಲ ಮಳೆಗೇ ಆತಂಕ: ಮತ್ತೆ ಕೊಚ್ಚಿಹೋಗೋ ಭೀತಿಯಲ್ಲಿ ಕೊಡಗು ಮಂದಿ

ಮಡಿಕೇರಿ: ಕೊಡಗಿನಲ್ಲಿ ಈ ಬಾರಿಯೂ ಭಿಕರ ಮಳೆಯಾಗುವ ಸಾಧ್ಯತೆಗಳಿವೆ. ಇಷ್ಟು ದಿನದವರೆಗೆ ಮಳೆನೇ ಇರಲಿಲ್ಲ. ಹೀಗಾಗಿ ಮಳೆ ಬರಲಿ ಎಂದು ಹೋಮ-ಹವನವೂ ನಡೆಯಿತು. ಈ ಬೆನ್ನಲ್ಲೇ ಮಳೆರಾಯ ಅಬ್ಬರಿಸುತ್ತಿದ್ದಾನೆ. ಮಳೆ ಇಲ್ಲದೆ ಕಂಗಾಲಾಗಿ ಹೋಗಿದ್ದ ಜನರಿಗೆ ಮತ್ತೆ ಆತಂಕ ಶುರುವಾಗಿದೆ.

ಹೌದು. ಮಂಜಿನನಗರಿ ಕೊಡಗಿನಲ್ಲಿ ಮಳೆರಾಯನ ಆಗಮನವಾಗಿದೆ. ಮಳೆಯಿಲ್ಲದೇ ಕಂಗಾಲಾಗಿ ಹೋಮ-ಹವನ ಮಾಡಿದ ಮರು ದಿನವೇ ವರುಣದೇವ ಕೃಪೆ ತೋರಿದ್ದಾನೆ. ಶುಕ್ರವಾರ ಬೆಳಗ್ಗೆಯಿಂದ ಮಲೆನಾಡಿನಾದ್ಯಂತ ಧಾರಾಕಾರ ಮಳೆಯಾಗ್ತಿದೆ. ಭಾಗಮಂಡಲದ ತ್ರೀವೇಣಿ ಸಂಗಮದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಇಂದೂ ಮಳೆ ಮುಂದುವರಿದ್ರೆ ಭಾಗಮಂಡಲ ಮುಳುಗಿ ಇಲ್ಲಿಯ ಜನ ಸಂಪರ್ಕ ಕಳೆದುಕೊಳ್ಳುವ ಸಾಧ್ಯತೆ ಇದೆ.

ಶುಕ್ರವಾರ ಒಂದು ದಿನ ಸುರಿದ ಮಳೆಗೆ ಮಡಿಕೇರಿ-ಮಂಗಳೂರು ಹೆದ್ದಾರಿಯ ಮದೆನಾಡು ಬಳಿ ರಸ್ತೆ ಕುಸಿದಿದ್ದು, ಜನ ಆತಂಕಗೊಂಡಿದ್ದಾರೆ. ಕಳೆದ ವರ್ಷ ಕರಾಳತೆ ಕಣ್ಣಮುಂದಿದೆ. ಈ ಬಾರಿಯೂ ಜಲಪ್ರಳಯವಾಗುತ್ತಾ ಅನ್ನೋ ಆತಂಕ ಎದುರಾಗಿದೆ. ಭಾರೀ ಮಳೆಗೆ ಮಡಕೇರಿ ಕೊಚ್ಚಿ ಹೋಗುತ್ತಾ ಅಂತ ಜನ ಗಾಬರಿಗೊಂಡಿದ್ದಾರೆ. ಸದ್ಯ ಬಿರುಕು ಬಿಟ್ಟಿರೋ ರಸ್ತೆಯಲ್ಲಿ ದುರಸ್ತಿ ಕಾರ್ಯ ನಡೀತಿದೆ.

ಭಾಗಮಂಡಲದಲ್ಲಿ ಸುರಿದ ಮಳೆಯಿಂದಾಗಿ ತಕ್ಕಮಟ್ಟಿಗೆ ಕಾವೇರಿಯಲ್ಲಿ ನೀರು ಹರಿದು ಬಂದಿದೆ. ವಾಡಿಕೆಯಂತೆ ಮಳೆಯಾಗಿದ್ದರೆ ಇನ್ನೂ ಹೆಚ್ಚಿನ ನೀರು ಹರಿಯುತ್ತಿತ್ತು. ಹೀಗಾಗಿ ಈಗಲಾದರೂ ಮಳೆ ಶುರುವಾಯ್ತಲ್ಲ ಎಂದು ಜನ ಖುಷಿಯಾಗಿದ್ದಾರೆ. ಇದರ ಜೊತೆಗೆ ಕಳೆದ ವರ್ಷದ ಕರಾಳತೆ ಕೂಡ ಮಲೆನಾಡಿಗರ ಕಣ್ಮುಂದೆ ಬರ್ತಿದೆ. ಹೀಗಾಗಿ ಚಿಕ್ಕ ಮಳೆಗೂ ಇಲ್ಲಿಯ ಜನರು ಆತಂಕ ಪಡುತ್ತಿದ್ದಾರೆ. ಇತ್ತ ಚಿಕ್ಕಮಗಳೂರಿನಲ್ಲೂ ಭಾರೀ ಮಳೆಯಾಗುತ್ತಿದ್ದು, ಮೂಡಿಗೆರೆ ಶಾಲಾ- ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ