ಮೈತ್ರಿ ಸರ್ಕಾರಕ್ಕೆ ಮತ್ತೊಂದು ಶಾಕ್; ರಾಜೀನಾಮೆ ನೀಡಿದ ಕಾಂಗ್ರೆಸ್​ ಶಾಸಕ ಆನಂದ್​ ಸಿಂಗ್?

ಬೆಂಗಳೂರು: ಮೈತ್ರಿ ಸರ್ಕಾರದ ಪತನಕ್ಕೆ ಹೊಂಚುಹಾಕಿ ಕುಳಿತಿರುವ ಬಿಜೆಪಿಯ ನಡೆಯಿಂದ ಮತ್ತು ಲೋಕಸಭಾ ಚುನಾವಣೆಯ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ನಾಯಕರಿಗೆ ಮತ್ತೊಂದು ಆಘಾತ ಎದುರಾಗಿದೆ. ಕಾಂಗ್ರೆಸ್​ ಅತೃಪ್ತರ ಬಣದಲ್ಲಿ ಗುರುತಿಸಿಕೊಂಡಿದ್ದ ಕಾಂಗ್ರೆಸ್​ ಶಾಸಕ ಆನಂದ್​ ಸಿಂಗ್ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಈಗಾಗಲೇ ರಾಜೀನಾಮೆ ಪತ್ರ ರವಾನೆ ಮಾಡಿರುವ ಆನಂದ್​ ಸಿಂಗ್ ಕಾಂಗ್ರೆಸ್ ಪಕ್ಷಕ್ಕೂ ರಾಜೀನಾಮೆ ನೀಡುವ ಸಾಧ್ಯತೆಯಿದೆ.  ಕಾಂಗ್ರೆಸ್​ ತೊರೆಯಲಿರುವ ಆನಂದ್​ ಸಿಂಗ್ ಶೀಘ್ರದಲ್ಲೇ ಬಿಜೆಪಿ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ಆಪರೇಷನ್​ ಕಮಲಕ್ಕೆ ಕೈಹಾಕಿದ್ದ ಬಿಜೆಪಿಯ ಗಾಳಕ್ಕೆ ಸಿಲುಕಿದ್ದ ಶಾಸಕರಲ್ಲಿ ಆನಂದ್​ ಸಿಂಗ್ ಕೂಡ ಒಬ್ಬರಾಗಿದ್ದರು. ಅದೇ ಕಾರಣಕ್ಕೆ ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ಎಲ್ಲ ಶಾಸಕರನ್ನೂ ಬಿಡದಿ ಬಳಿಯ ಈಗಲ್ಟನ್ ರೆಸಾರ್ಟ್ಗೆ ಕರೆದೊಯ್ದಿದ್ದರು.

ಈಗಲ್ಟನ್ ರೆಸಾರ್ಟ್ನಲ್ಲಿ ಕಂಪ್ಲಿ ಗಣೇಶ್ ಮತ್ತು ಹೊಸಪೇಟೆ ಶಾಸಕ ಆನಂದ್ ಸಿಂಗ್ ನಡುವೆ ಕುಡಿದ ಮತ್ತಿನಲ್ಲಿ ಭಾರೀ ಗಲಾಟೆಯಾಗಿತ್ತು. ಈ ಗಲಾಟೆಯಲ್ಲಿ ಕಂಪ್ಲಿ ಗಣೇಶ್ ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ತಿಂಗಳುಗಳ ಕಾಲ ಕಂಪ್ಲಿ ಗಣೇಶ್ಗಾಗಿ ಹುಡುಕಾಟ ನಡೆಸಿದ್ದ ಬಿಡದಿ ಪೊಲೀಸರು ಬೇರೆ ರಾಜ್ಯದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಬಳಿಕ, ಈ ಪ್ರಕರಣದಲ್ಲಿ ಕಂಪ್ಲಿ ಗಣೇಶ್ಗೆ ಜಾಮೀನು ಸಿಕ್ಕಿತ್ತು.

ಜಿಂದಾಲ್ ಪ್ರಕರಣದಲ್ಲಿ ಅಸಮಾಧಾನ ಹೊಂದಿರುವ ಆನಂದ್ ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆನಂದ್ ಸಿಂಗ್ ರಾಜೀನಾಮೆ ಬೆನ್ನಲ್ಲೇ ಕೈ ಪಾಳಯಕ್ಕೆ ದೊಡ್ಡ ಆಘಾತ ಎದುರಾಗಲಿದ್ದು, ಮೈತ್ರಿ ಸರ್ಕಾರದ ಬಗ್ಗೆ ಅಸಮಾಧಾನ ಹೊಂದಿರುವ 7 ಶಾಸಕರು ರಾಜೀನಾಮೆ ನೀಡುವ ಸಾಧ್ಯತೆಯಿದೆ. ಕಾಂಗ್ರೆಸ್​ ನಾಯಕರಾದ ಬಿ.ಸಿ. ಪಾಟೀಲ್, ಕಂಪ್ಲಿ ಗಣೇಶ್ ಯಾವುದೇ ಸಂಪರ್ಕಕ್ಕೆ ಸಿಗುತ್ತಿಲ್ಲ. ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಅಮೆರಿಕ ಪ್ರವಾಸದಲ್ಲಿರುವುದರಿಂದ ಇದೇ ಸಂದರ್ಭ ನೋಡಿಕೊಂಡು ರಾಜೀನಾಮೆ ನೀಡಿ ಆನಂದ್​ ಸಿಂಗ್​ ಅವರೊಂದಿಗೆ 7 ಶಾಸಕರು ಬಿಜೆಪಿಗೆ ಸೇರುವ ಸಾಧ್ಯತೆಯಿದೆ.

ಬಳ್ಳಾರಿಯ ಸಂಡೂರು ತಾಲೂಕಿನ ತೋರಣಗಲ್ ಪ್ರದೇಶದಲ್ಲಿ ಒಟ್ಟಾರೆ 3,666 ಎಕರೆ ಜಮೀನನ್ನು ಜಿಂದಾಲ್ ಉಕ್ಕು ಸಂಸ್ಥೆಗೆ ತೀರಾ ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿದೆ ಎಂದು ಕಾಂಗ್ರೆಸ್​ನ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಅವರು ಕೆಲ ದಿನಗಳ ಹಿಂದೆ ಆರೋಪಿಸಿದ್ದರು. ಸರಕಾರಕ್ಕೆ 2 ಸಾವಿರ ಕೋಟಿಯಷ್ಟು ಹಣ ಬಾಕಿ ಉಳಿಸಿಕೊಂಡಿರುವ ಜಿಂದಾಲ್​ನಂತಹ ಸಂಸ್ಥೆಗೆ ಇಷ್ಟು ಕಡಿಮೆ ಬೆಲೆಗೆ ಭೂಮಿ ಮಾರಾಟ ಮಾಡುವ ಅವಶ್ಯಕತೆ ಏನು? ಹಾಗೆಯೇ, ಜಿಂದಾಲ್ ಸಂಸ್ಥೆ ವಿರುದ್ಧ ಅಕ್ರಮ ಗಣಿಗಾರಿಕೆಯ ಆರೋಪವೂ ಇದೆ. ಇಂಥ ಕಂಪನಿಗೆ ವಿನಾಯಿತಿ ನೀಡುವುದೇಕೆ? ಎಂದು ಕೇಳಿದ್ದರು. ಜಿಂದಾಲ್​ ಕಂಪನಿಗೆ ಭೂಮಿ ನೀಡುವುದಕ್ಕೆ ಬಿಜೆಪಿ ಕೂಡ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿತ್ತು. ಇದೀಗ, ಆ ಜಿಂದಾಲ್​ ಪ್ರಕರಣವೇ ಮೈತ್ರಿ ಸರ್ಕಾರಕ್ಕೆ ಮುಳ್ಳಾದಂತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ