ಮನುಕುಲಕ್ಕೆ ಉಗ್ರವಾದ ಅತೀ ದೊಡ್ಡ ಬೆದರಿಕೆಯಾಗಿದೆ: ಪ್ರಧಾನಿ ಮೋದಿ

ಒಸಾಕ: ಇಡೀ ಮನುಕುಲಕ್ಕೆ ಭಯೋತ್ಪಾದನೆ ದೊಡ್ಡ ಬೆದರಿಕೆಯಾಗಿ ಮಾರ್ಪಟ್ಟಿದ್ದು, ಉಗ್ರವಾದವೂ ಸೇರಿದಂತೆ ಜಗತ್ತು ಇಂದು ಮೂರು ಪ್ರಮುಖ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಜಪಾನ್ ನ ಒಸಾಕಾದಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ಜಗತ್ತನ್ನು ಮೂರು ಪ್ರಮುಖ ಸಮಸ್ಯೆಗಳು ಭಾದಿಸುತ್ತಿದೆ. ವಾಣಿಜ್ಯ ಸಮರದಿಂದಾಗಿ ಜಾಗತಿಕವಾಗಿ ಮೂಡಿರುವ ಆರ್ಥಿಕ ಅನಿಶ್ಚಿತತೆ, ನಿಯಮ ಆಧಾರಿತ ಬಹುಪಕ್ಷೀಯ ಅಂತಾರಾಷ್ಟ್ರೀಯ ವ್ಯಾಪಾರ ವ್ಯವಸ್ಥೆಯಲ್ಲಿ ಏಕಪಕ್ಷೀಯ ನಿರ್ಧಾರ ಮತ್ತು ಪ್ರತಿದ್ವಂದ್ವ ವಾತಾವರಣದಿಂದ ಆಗುತ್ತಿರುವ ಸಮಸ್ಯೆಗಳು ಹಾಗೂ ಆರ್ಥಿಕ ಪ್ರಗತಿಯತ್ತ ಸಾಗುತ್ತಿರುವ ರಾಷ್ಟ್ರಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರದಲ್ಲಿನ ಹೂಡಿಕೆಯಲ್ಲಿ ಆಗಿರುವ 1.3 ಟ್ರಿಲಿಯನ್​ ಡಾಲರ್​ ಕೊರತೆ ಆ ಮೂರು ಸವಾಲುಗಳಾಗಿವೆ ಎಂದು ಮೋದಿ ವಿವರಿಸಿದರು.

ಅಂತೆಯೇ ಡಿಜಿಟಲೀಕರಣ ಮತ್ತು ತಾಂತ್ರಿಕತೆಯ ತಲುಪುವಿಕೆಯಲ್ಲಿ ನಿಧಾನಗತಿ. ಅಲ್ಲದೆ ತಂತ್ರಜ್ಞಾನದ ಸಕಾರಾತ್ಮಕ ಬಳಕೆಗಿಂತಲೂ ನಕಾರಾತ್ಮಕ ಬಳಕೆ ಹೆಚ್ಚಾಗುತ್ತಿದ್ದು, ಉಪಯೋಗಕ್ಕಿಂತ ದುರ್ಬಳಕೆಯೇ ಹೆಚ್ಚಾಗಿದೆ ಇದು ಚಿಂತಿಲೇಬೇಕಾದ ಗಂಭೀರ ವಿಚಾರವಾಗಿದೆ ಎಂದು ಹೇಳಿದರು.

ಇದೇ ವೇಳೆ ಉಗ್ರವಾದವನ್ನು ತೀವ್ರವಾಗಿ ಖಂಡಿಸಿದ ಪ್ರಧಾನಿ ಮೋದಿ, ‘ಮನುಕುಲಕ್ಕೆ ಭಯೋತ್ಪಾದನೆ ಅತ್ಯಂತ ದೊಡ್ಡ ಬೆದರಿಕೆಯಾಗಿದೆ. ಇದು ಕೇವಲ ಅಮಾಯಕರ ಪ್ರಾಣವನ್ನು ಮಾತ್ರವಲ್ಲ, ಪರೋಕ್ಷವಾಗಿ ಆರ್ಥಿಕಾಭಿವೃದ್ಧಿ, ಕೋಮುಸಂಘರ್ಷದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ಹೀಗಾಗಿ ನಾವು ಎಲ್ಲ ಮಾದರಿಯ ಉಗ್ರವಾದವನ್ನು ಹತ್ತಿಕ್ಕಬೇಕು. ಉಗ್ರವಾದವನ್ನು ಮಾತ್ರವಲ್ಲ, ಅದಕ್ಕೆ ನೇರವಾಗಿ ಮತ್ತು ಪರೋಕ್ಷವಾಗಿ ಬೆಂಬಲ ನೀಡುವ ಮೂಲಗಳಿಗೂ ಕತ್ತರಿ ಹಾಕಬೇಕು. ಉಗ್ರವಾದಕ್ಕೆ ಸಂಬಂಧಿಸಿದಂತೆ ನಾವು ನಿಷ್ಕ್ರಿಯರಾಗಿರಲು ಸಾಧ್ಯವೇ ಇಲ್ಲ. ಭಯೋತ್ಪಾದನೆಗೆ ಬೆಂಬಲ ನೀಡುವ ಎಲ್ಲ ಸಂಗತಿಗಳನ್ನೂ ನಾವು ವಿರೋಧಿಸಬೇಕು ಎಂದು ಹೇಳಿದರು.

ಅಂತೆಯೇ ಇದೇ ವೇಳೆ ಐದು ಪ್ರಮುಖ ಸಲಹೆಗಳನ್ನೂ ನೀಡಿದ ಪ್ರಧಾನಿ ಮೋದಿ, ಮೊದಲು ಜಾಗತಿಕ ಸಮುದಾಯ ಮತ್ತು ಆರ್ಥಿಕ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸಬೇಕು. ನಿರಂತರ ಆರ್ಥಿಕ ವಿಕಾಸದಿಂದ ಬದಲಾವಣೆ ಖಂಡಿತಾ ಸಾಧ್ಯ. ಇದಕ್ಕಾಗಿ ಇಂಧನ ಮತ್ತು ಗ್ಯಾಸ್ ದರ ಇಳಿಕೆ ಮತ್ತು ಅವುಗಳ ಮೇಲಿನ ಅವಲಂಬನೆಯನ್ನು ನಿಯಂತ್ರಿಸಬೇಕು. ಹೊಸ ಅಭಿವೃದ್ಧಿಯಡಿಯಲ್ಲಿ ಸದಸ್ಯ ರಾಷ್ಟ್ರಗಳ ಭೌತಿಕ ಮತ್ತು ಸಾಮಾಜಿಕ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಬೇಕು. 

ಇಂಧನ ಕ್ಷೇತ್ರದಲ್ಲಿ ತೈಲ ಮತ್ತು ಅನಿಲ ಕಡಿಮೆ ದರದಲ್ಲಿ ಲಭಿಸುವಂತೆ ಮಾಡಬೇಕು. ಜತೆಗೆ ಮರುನವೀಕರಿಸಬಹುದಾದ ಇಂಧನ ಮೂಲಗಳ ಆವಿಷ್ಕಾರಕ್ಕೆ ಒತ್ತು ನೀಡಬೇಕು ಎಂದು ಪ್ರಧಾನಿ ಮೋದಿ ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ