ಸ್ವಾಮೀಜಿ ಒಪ್ಪಿದ್ರೆ ಈಗಲೇ ರಾಜೀನಾಮೆ ಕೊಡುತ್ತೇನೆ: ಶ್ರೀರಾಮುಲು

ಬೆಂಗಳೂರು: ಸರ್ಕಾರ ಮೀಸಲಾತಿ ನೀಡುವವರೆಗೆ ನಾನು ಬಿಡಲ್ಲ. ಒಂದು ಅದೇಶ ಕೊಡಿ ಸ್ವಾಮೀಜಿ.  ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಶ್ರೀರಾಮುಲು ಬಹಿರಂಗವಾಗಿಯೇ ಹೇಳಿದ್ದಾರೆ.

ಇಂದು ಫ್ರೀಡಂ ಪಾರ್ಕ್ ನಲ್ಲಿ ವಾಲ್ಮಿಕಿ ಸಮುದಾಯದಿಂದ ಪರಿಶಿಷ್ಟ ಪಂಗಡದವರಿಗೆ ಶೇ.7.5ರಷ್ಟು ಮಿಸಲಾತಿಗೆ ಒತ್ತಾಯಿಸಿ ನಡೆಯುತ್ತಿರುವ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ವಾಮೀಜಿ ಒಪ್ಪಿದರೆ ಈಗಲೇ ಈ ವೇದಿಕೆಯಲ್ಲೇ ರಾಜೀನಾಮೆ ಕೊಡುವೆ ಎಂದು ಹೇಳುವ ಮೂಲಕ ಶ್ರೀರಾಮುಲು ಅವರು ರಾಜಕೀಯ ನಿವೃತ್ತಿ ಕುರಿತು ಮಾತಾನಾಡಿದ್ದಾರೆ.

ನಾವು ಬೀದಿಗೆ ಬಂದ್ರೆ ಯಾರ ಮಾತೂ ಕೇಳಲ್ಲ. ವಾಲ್ಮೀಕಿ ಸಮುದಾಯದ ಸ್ವಾಮೀಜಿಗಳು ಕೊಟ್ಟ ಭಿಕ್ಷೆಯಿಂದ ಇಂದು ನಾವು ರಾಜಕಾರಣದಲ್ಲಿದ್ದೇವೆ. ನಾವು ಈ ಸ್ಥಾನದಲ್ಲಿರಲು ಸ್ವಾಮೀಜಿಗಳು ಕಾರಣರಾಗಿದ್ದಾರೆ. ಸ್ವಾಮೀಜಿಗಳ ಆಶೀರ್ವಾದದಿಂದ ನಾವು ಇಂದು ಇಲ್ಲಿದ್ದೇವೆ. ಜೀವನದಲ್ಲಿ ಯಾವುದು ಶಾಶ್ವತವಲ್ಲ.

ಸಮಾಜಕ್ಕಾಗಿ ಕೆಲಸ ಮಾಡಬೇಕು. ನಾವು ನಾಳೆ ಬದುಕುವ ಯಾವ ಗ್ಯಾರಂಟಿಯೂ ಇಲ್ಲ. ಬದುಕುವವರೆಗೆ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡೋಣ ಎಂದರು.

ಸ್ವಾಮೀಜಿಗಳೇ ಶ್ರೀರಾಮಲುಗೆ ಆದೇಶ ಕೊಡಿ. ಇಂದೇ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಸಮುದಾಯದ ಪರವಾಗಿ ರಾಜೀನಾಮೆ ಕೊಡಲು ನಾನು ಸಿದ್ಧ. ನಮ್ಮ ಸಮುದಾಯದ ಪರವಾಗಿ ಹೋರಾಡುತ್ತೇನೆ. ನನ್ನ ಸಮುದಾಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ. ವಿಧಾನಸೌಧ ಗಡ ಗಡ ನಡುಗಬೇಕು. ಅಲ್ಲಿಯವರೆಗೆ ಹೋರಾಟ ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದರು.

ನಗರದ ಫ್ರೀಡಂ ಪಾರ್ಕ್ ನಲ್ಲಿ ನಡಯುತ್ತಿರುವ ಈ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ವಾಲ್ಮಿಕಿ ಸಮಾಜದ ಮಂದಿ ಆಗಮಿಸಿದ್ದಾರೆ. ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿಯವರು ರಾಜನಹಳ್ಳಿಯಿಂದ ಬೆಂಗಳೂರಿಗೆ ಪಾದಯಾತ್ರೆ ಮುಖಾಂತರ ಆಗಮಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ