ಎಸ್​ಎಂ ಕೃಷ್ಣ ಸಹೋದರ ಮಾಜಿ ವಿಧಾನ ಪರಿಷತ್ ಸದಸ್ಯ ಎಸ್​ಎಂ ಶಂಕರ್ ವಿಧಿವಶ!

ಬೆಂಗಳೂರು; ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಎಸ್​.ಎಂ. ಕೃಷ್ಣ ಅವರ ಖಾಸಾ ಸಹೋದರ ಎಸ್​.ಎಂ. ಶಂಕರ್ (83) ಇಂದು ವಿಧಿವಶರಾಗಿದ್ದಾರೆ.

ಎಸ್​. ಎಂ. ಕೃಷ್ಣ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎಸ್​.ಎಂ. ಶಂಕರ್ ಅವರನ್ನು ಸದನದ ಮೇಲ್ಮನೆಗೆ ಆಯ್ಕೆ ಮಾಡಿ ಕಳುಹಿಸಲಾಗಿತ್ತು.

ವಯೋ ಸಹಜ ಖಾಯಿಲೆಗೆ ಒಳಗಾಗಿದ್ದ ಎಸ್​.ಎಂ. ಶಂಕರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಮೃತರ ಅಗಲಿಕೆಗೆ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಟ್ವೀಟರ್​ನಲ್ಲಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಎಸ್ ಎಂ ಕೃಷ್ಣ ಅವರ ಸಹೋದರ ಹಾಗೂ ಈ ಹಿಂದೆ ವಿಧಾನ ಪರಿಷತ್ತಿನ ಸದಸ್ಯರಾಗಿದ್ದ ಎಸ್ ಎಂ ಶಂಕರ್ ಅವರ ನಿಧನಕ್ಕೆ ನನ್ನ ತೀವ್ರ ಸಂತಾಪಗಳು. ದೇವರು ಅವರ ಕುಟುಂಬ ವರ್ಗಕ್ಕೆ ಅವರ ಅಗಲಿಕೆಯನ್ನು ಸಹಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ.

ಮೃತರ ಅಂತ್ಯ ಕ್ರಿಯೆಯನ್ನು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸ್ವಗ್ರಾಮ ಸೋಮನಹಳ್ಳಿಯಲ್ಲಿ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ