ಜೂ.17 ಮತ್ತು 18ರಂದು ಸ್ವಕ್ಷೇತ್ರದಲ್ಲಿ ಸಿಎಂ ಜನತಾ ದರ್ಶನ

ಬೆಂಗಳೂರು, ಜೂ.16- ಮುಖ್ಯಮಂತ್ರಿಗಳ ಮಹತ್ವದ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೂ ಮುನ್ನವೇ ತಮ್ಮ ಸ್ವಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ಜನತಾ ದರ್ಶನ ನಡೆಸಲಿದ್ದಾರೆ.

ನಾಳೆ (ಜೂ.17) ಮತ್ತು ಜೂ.18ರಂದು ಸರಣಿ ಜನತಾ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಅವರು ಸ್ಥಳದಲ್ಲೇ ಪರಿಹಾರ ಸೂಚಿಸುವರು.

ವಾರಾಂತ್ಯದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಆರಂಭಿಸುತ್ತಿದ್ದು , ಇದರ ಹಿನ್ನೆಲೆಯಲ್ಲಿ ನಾಳೆ ಚನ್ನಪಟ್ಟಣಕ್ಕೆ ತೆರಳಲಿರುವ ಮುಖ್ಯಮಂತ್ರಿಗಳು ಬೆಳಗ್ಗೆ 9 ಗಂಟೆಗೆ ತಾಲ್ಲೂಕಿನ ಇಗ್ಗಲೂರಿಗೆ ತೆರಳಿ ಬ್ಯಾರೇಜ್ ಕಾಮಗಾರಿ ಪರಿಶೀಲನೆ ಹಾಗೂ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸುವರು.

10 ಗಂಟೆಗೆ ಅಕ್ಕೂರು ಹೋಬಳಿಯಲ್ಲಿ ಜನತಾ ದರ್ಶನದ ಮೂಲಕ ಜನರ ಕುಂದು ಕೊರತೆಯನ್ನು ಆಲಿಸಲಿದ್ದಾರೆ.

ಮಧ್ಯಾಹ್ನ 1 ಗಂಟೆಗೆ ಅಕ್ಕೂರು ಮತ್ತು ಕೋಡಂಬಳ್ಳಿಯಲ್ಲಿ ಜನರ ಕುಂದು ಕೊರತೆ ಆಲಿಸಿ ಮನವಿ ಸ್ವೀಕರಿಸುವರು.

ಸಂಜೆ 4 ಗಂಟೆಗೆ ಕೋಡಂಬಳ್ಳಿ ಮತ್ತು 4.25ಕ್ಕೆ ಹೊಂಗನೂರು ಹೋಬಳಿಯಲ್ಲಿ ಜನತಾ ದರ್ಶನ ಕೈಗೊಳ್ಳಲಿದ್ದಾರೆ.

ನಂತರ ರಾತ್ರಿ 8 ಗಂಟೆಗೆ ಹೊಂಗನೂರಿನಿಂದ ಬೆಂಗಳೂರಿಗೆ ಹಿಂದಿರುಗುವರು.

ಮಂಗಳವಾರ ಬೆಳಗ್ಗೆ 8.30ಕ್ಕೆ ಬೆಂಗಳೂರಿನಿಂದ ತೆರಳುವ ಮುಖ್ಯಮಂತ್ರಿಗಳು ಚನ್ನಪಟ್ಟಣದ ಬೇವೂರು ಹೋಬಳಿಯಲ್ಲಿ ಸರ್ಕಾರಿ ಶಾಲೆ ಮೈದಾನದಲ್ಲಿ ಜನತಾ ದರ್ಶನ ನಡೆಸುವರು.

ನಂತರ ಮಧ್ಯಾಹ್ನ 2.30ಕ್ಕೆ ದೊಡ್ಡ ಮಳೂರು ಹೋಬಳಿಯ ಸರ್ಕಾರಿ ಶಾಲೆ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕುಂದು ಕೊರತೆ ಸಭೆ ನಡೆಯಲಿದೆ.

ಸಂಜೆ 4 ಗಂಟೆಗೆ ಬೈರಾಪಟ್ಟಣ ಹಾಗೂ 4.25ಕ್ಕೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ಟೌನ್‍ನಲ್ಲಿ ಸರ್ಕಾರಿ ಶಾಲೆ ಮೈದಾನದಲ್ಲಿ ಹೋಬಳಿ ಮಟ್ಟದ ಜನತಾ ದರ್ಶನ ಮತ್ತು ಮನವಿ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ.ರಾತ್ರಿ 8 ಗಂಟೆಗೆ ಚನ್ನಪಟ್ಟಣದಿಂದ ಬೆಂಗಳೂರಿಗೆ ವಾಪಸಾಗುವರು.

ರಾಜ್ಯಾದ್ಯಂತ ಕೈಗೊಳ್ಳಲಿರುವ ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ಸ್ವ ಕ್ಷೇತ್ರವನ್ನು ಕಡೆಗಣಿಸಬಾರದು ಎಂಬ ಕಾರಣದಿಂದ ಎರಡು ದಿನಗಳ ಕಾಲ ಚನ್ನಪಟ್ಟಣದಲ್ಲಿ ಜನರ ಕಷ್ಟ-ಸುಖ ಆಲಿಸುವ ಜನತಾದರ್ಶನ ನಡೆಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ