ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಬಿಜೆಪಿ ಪ್ರತಿಭಟನೆ

ಬೆಂಗಳೂರು, ಜೂ.15-ಸಮ್ಮಿಶ್ರ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ನಗರದ ಆನಂದ್‍ರಾವ್ ವೃತ್ತದ ಗಾಂಧಿ ಪ್ರತಿಮೆ ಬಳಿ ರಾತ್ರಿ ಅಲ್ಲಿಯೇ ನಿದ್ರಿಸುವ ಮೂಲಕ ಬಿಜೆಪಿಯವರು ಪ್ರತಿಭಟನೆ ನಡೆಸಿದರು.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮುಖಂಡರಾದ ಆರ್.ಅಶೋಕ್, ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಪರಣ್ಣ ಮನವಳ್ಳಿ, ನಾರಾಯಣಸ್ವಾಮಿ ಸೇರಿದಂತೆ ವಿಧಾನಪರಿಷತ್ ಸದಸ್ಯರು, ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿಭಟನಾ ಸ್ಥಳದಲ್ಲೇ ವಾಸ್ತವ್ಯ ಹೂಡಿದ್ದರು.

ರಾತ್ರಿ 10 ಗಂಟೆ ನಂತರ ಪ್ರತಿಭಟನಾ ಸ್ಥಳದಲ್ಲಿ ಪ್ರಮುಖರಿಗೆ ನಿದ್ರೆ ಮಾಡಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಕೆಲವು ನಾಯಕರು ಬೇಗನೆ ನಿದ್ರೆಗೆ ಜಾರಿದರೆ, ಇನ್ನು ಕೆಲವರು ಜಿಟಜಿಟಿ ಮಳೆ, ಚಳಿ, ಸೊಳ್ಳೆ ಕಾಟದಿಂದ ಚಡಪಡಿಸುತ್ತಿದ್ದ ದೃಶ್ಯ ಕಂಡುಬಂದಿತು.

ಅದರಲ್ಲೂ ಆರ್.ಅಶೋಕ್ ನಿದ್ರೆಗೆ ಜಾರಿದರಾದರೂ ಸೊಳ್ಳೆಗಳ ಕಾಟದಿಂದ ಎದ್ದು ಕೂತರು. ನಂತರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯ ತೇಜಸ್ವಿ ಸೂರ್ಯ ಸೇರಿದಂತೆ ಕೆಲವರ ಜೊತೆ ಮಧ್ಯರಾತ್ರಿ 1 ಗಂಟೆಯವರೆಗೆ ಹರಟೆ ಹೊಡೆದರು.

ಬೆಳಗ್ಗೆ 5 ಗಂಟೆಗೆ ಎದ್ದ ಅಶೋಕ್ ಛಾಯಾಗ್ರಾಹಕರೊಬ್ಬರ ದ್ವಿಚಕ್ರ ವಾಹನ ತೆಗೆದುಕೊಂಡು ವಾಯುವಿಹಾರ ನಡೆಸಿದರು. ಇದೇ ವೇಳೆ ಯಡಿಯೂರಪ್ಪ ಸೇರಿದಂತೆ ಪ್ರತಿಭಟನಾ ಸ್ಥಳದಲ್ಲಿದ್ದ ಮತ್ತಿತರರು ಮೊದಲು ಒಂದು ಸುತ್ತು ವಾಯುವಿಹಾರ ನಡೆಸಿ ತಮ್ಮ ದಿನನಿತ್ಯದ ಚಟುವಟಿಕೆಗಳನ್ನು ಪೂರ್ಣಗೊಳಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಲು ದೂರದ ಊರುಗಳಿಂದ ಬಂದಿದ್ದ ಶಾಸಕರು ಮತ್ತು ಪಕ್ಷದ ಪ್ರಮುಖರಿಗೆ ಮೌರ್ಯ ಹೊಟೇಲ್‍ನಲ್ಲೇ ವಾಸ್ತವ್ಯ ಕಲ್ಪಿಸಲಾಗಿತ್ತು. ಬಹುತೇಕ ಎಲ್ಲರೂ ತಮ್ಮ ನಿತ್ಯಕರ್ಮಗಳನ್ನು ಪೂರ್ಣಗೊಳಿಸಿ ಬಳಿಕ ಮತ್ತೆ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ಜಿಂದಾಲ್ ಕಂಪನಿಗೆ ಜಮೀನು ಪರಭಾರೆ ಮಾಡುವ ಸಂಬಂಧ ಸಂಪುಟ ಉಪಸಮಿತಿ ರಚಿಸಿರುವುದಕ್ಕೆ ಖುಷಿಯಾಗಿರುವ ಬಿಜೆಪಿ ನಾಯಕರು ಇನ್ನಷ್ಟು ಉಗ್ರವಾಗಿ ಹೋರಾಟ ನಡೆಸಲು ಮುಂದಾಗಿದ್ದಾರೆ.

ಹೀಗಾಗಿ 105 ಮಂದಿ ಶಾಸಕರು 25 ಲೋಕಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರು, ರಾಜ್ಯಸಭಾ ಸದಸ್ಯರು ಸೇರಿದಂತೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನಾಳೆ ಬೃಹತ್ ಪ್ರಮಾಣದಲ್ಲಿ ಭಾಗವಹಿಸಲಿದ್ದಾರೆ.

ನಾಳೆ ಮಧ್ಯಾಹ್ನ 1 ಗಂಟೆಗೆ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕುವ ಮೂಲಕ ಸಮ್ಮಿಶ್ರ ಸರ್ಕಾರಕ್ಕೆ ಎಚ್ಚರಿಕೆ ಸಂದೇಶವನ್ನು ರವಾನಿಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ