ಮಳೆ ನೀರು ಸಂರಕ್ಷಿಸುವಂತೆ ಗ್ರಾಮಗಳ ಮುಖ್ಯಸ್ಥರಿಗೆ ಪ್ರಧಾನಿ ಮೋದಿ ವೈಯಕ್ತಿಕ ಪತ್ರ

ನವದೆಹಲಿಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮುಂಬರುವ ಮಾನ್ಸೂನ್ ಸಮಯದಲ್ಲಿ ಮಳೆ ನೀರನ್ನು ಸಂರಕ್ಷಿಸುವಂತೆ ಕೋರಿ ಗ್ರಾಮಗಳ ಮುಖ್ಯಸ್ಥರಿಗೆ ವೈಯಕ್ತಿಕ ಪತ್ರ ಬರೆದಿದ್ದಾರೆ.

ಪ್ರಧಾನಿ ಮೋದಿ ಸಹಿಯಿರುವ ಪತ್ರಗಳನ್ನು ಎಲ್ಲಾ ಜಿಲ್ಲೆಗಳ ಆಯಾ ಜಿಲ್ಲಾಧಿಕಾರಿಗಳು ಮತ್ತು ಸಂಗ್ರಾಹಕರ ಮೂಲಕ ಗ್ರಾಮಗಳ ಮುಖ್ಯಸ್ಥರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.

ಈಗಾಗಲೇ ಸಾಕಷ್ಟು ಗ್ರಾಮಗಳಿಗೆ ಪ್ರಧಾನಿ ಪತ್ರ ತಲುಪಿದ್ದು, ಎಲ್ಲಾ ಚರ್ಚಾ ವಿಷಯವಾಗಿದೆ. ಪ್ರಧಾನಿ ಮೋದಿ ಕ್ಷೇತ್ರವಾಗಿರುವ ವಾರಣಾಸಿಯ ಸಮೀಪದಲ್ಲಿರುವ  ಸೋನ್‌ಭದ್ರದಲ್ಲಿ 637 ಗ್ರಾಮಗಳ ಮುಖಂಡರಿಗೆ ಪ್ರಧಾನಿ ಸಹಿಯಿರುವ ಪತ್ರವನ್ನು ತಲುಪಿಸಲಾಗಿದೆ. ಅದರಲ್ಲಿ ಮಳೆ ನೀರನ್ನು ಸಂಗ್ರಹಿಸಿ ಸಂರಕ್ಷಿಸುವಂತೆ ಪ್ರಧಾನಿ ಮನವಿ ಮಾಡಿದ್ದಾರೆ.

ಹಿಂದಿಯಲ್ಲಿ ಬರೆದಿರುವ ಪತ್ರದಲ್ಲಿ “ಆತ್ಮೀಯ ಸರ್ಪಂಚ್‌ಜಿ, ನಮಸ್ಕಾರ್. ನೀವು ಮತ್ತು ಪಂಚಾಯತ್‌ನ ನನ್ನ ಎಲ್ಲಾ ಸಹೋದರರು ಮತ್ತು ಸಹೋದರಿಯರು ಆರೋಗ್ಯದಿಂದ ಇದ್ದೀರಿ ಎಂದು ನಾನು ಭಾವಿಸುತ್ತೇನೆ. ಇನ್ನೇನು ಮಳೆಗಾಲ ಪ್ರಾರಂಭವಾಗಲಿದೆ. ಆ ದೇವರು ನಮಗೆ ಸಾಕಷ್ಟು ಮಳೆ ನೀರನ್ನು ಆಶೀರ್ವದಿಸಲಿದ್ದಾನೆ. ಆ ನೀರನ್ನು ನಾವು ಸಂರಕ್ಷಿಸಿ ಮರುಬಳಕೆಗೆ ಸಾಕಷ್ಟು ಪ್ರಯತ್ನಗಳನ್ನು ಮತ್ತು ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕಿದೆ” ಎಂದು ಮೋದಿ ಹೇಳಿದ್ದಾರೆ.

“ಎಲ್ಲಾ ಗ್ರಾಮದ ಮುಖಂಡರು ಗ್ರಾಮಸಭೆ ಕರೆದು, ಈ ಪತ್ರವನ್ನು ಎಲ್ಲರ ಮುಂದೆ ಓದಿ, ನೀರನ್ನು ಹೇಗೆ ಸಂರಕ್ಷಿಸಬೇಕು ಎಂಬುದರ ಬಗ್ಗೆ ಚರ್ಚಿಸಿ. ಪ್ರತಿ ಹನಿ ಮಳೆ ನೀರನ್ನು ಉಳಿಸಲು ಸಮರ್ಪಕವಾಗಿ ವ್ಯವಸ್ಥೆ ಮಾಡಿಕೊಳ್ಳಲಿದ್ದೀರಿ ಎಂದು ನಿಮ್ಮೆಲ್ಲರ ಬಗ್ಗೆ ನಂಗೆ ನಂಬಿಕೆಯಿದೆ” ಎಂದು ಮೋದಿ ಪತ್ರದಲ್ಲಿ ವಿವರಿಸಿದ್ದಾರೆ.

ಪತ್ರದಲ್ಲಿ ಮಳೆನೀರನ್ನು ಸರಿಯಾಗಿ ಕೊಯ್ಲು ಮಾಡಬಹುದಾದ ಚೆಕ್ ಡ್ಯಾಮ್ ಮತ್ತು ಕೊಳಗಳ ನಿರ್ಮಾಣದ ಬಗ್ಗೆಯೂ  ಪ್ರಧಾನಿ ಸೂಚಿಸಿದ್ದು, ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ 775 ಕೊಳಗಳನ್ನು ಅಗೆಯುವ ಯೋಜನೆಯನ್ನು ರೂಪಿಸಲಾಗಿದ್ದು, 500 ಕೊಳಗಳ ನಿರ್ಮಾಣ ಕಾಮಗಾರಿ ಈಗಾಗಲೇ ಪ್ರಾರಂಭವಾಗಿದೆ ಎಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ