ಬಿಜೆಪಿ ಬಂಗಾಳವನ್ನು ಗುಜರಾತ್ ಮಾಡಲು ಹೊರಟಿದೆ ಅದು ಎಂದಿಗೂ ಸಾಧ್ಯವಿಲ್ಲ: ಸಿಎಂ ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಅನಗತ್ಯ ಗಲಭೆ, ಸಂಘರ್ಷಗಳನ್ನು ಮಾಡಿಸುವ ಮೂಲಕ ಬಿಜೆಪಿ, ಬಂಗಾಳವನ್ನು ಗುಜರಾತ್ ಮಾಡಲು ಹೊರಟಿದೆ. ಆದರೆ, ನಾನು ಜೀವಂತವಾಗಿರುವವರೆಗೆ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.

ಪರಗಣ ಜಿಲ್ಲೆಯಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ರಾಜಕೀಯ ಗಲಭೆ ಎಬ್ಬಿಸುವ ಮೂಲಕ ಬಂಗಾಳವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದೆ. ವೈದ್ಯರ ಮುಷ್ಕರ ವಿಷಯದಲ್ಲೂ ಕೂಡ ಕೇಂದ್ರ ಸರ್ಕಾರದ ದುರುದ್ದೇಶವಿದೆ ಎಂದು ಹರಿಹಾಯ್ದಿದ್ದರು.

ಬಂಗಾಳದಲ್ಲಿ ಇರಲು ಬಯಸುವವರು ಬಂಗಾಳಿ ಭಾಷೆಯನ್ನು ಕಲಿಯಲೇ ಬೇಕು. ಬೇರೆ ಭಾಷೆಗಳಿಗೆ ಇಲ್ಲಿ ಆಸ್ಪದವಿಲ್ಲ ಎಂದು ಹಿಂದಿ ಹೇರಿಕೆ ಹಾಗೂ ಹೊರ ರಾಜ್ಯ ಹಾಗೂ ವಿದೇಶದಿಂದ ಬರುವವರಿಗೆ ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದಾರೆ.

ದೆಹಲಿಗೆ ತೆರಳಿದಾಗ ಹಿಂದಿಯಲ್ಲಿ ಮಾತನಾಡುತ್ತೇವೆ. ಪಂಜಾಬ್‍ಗೆ ತೆರಳಿದಾಗ ಪಂಜಾಬಿ ಭಾಷೆ ಮಾತನಾಡುತ್ತೇವೆ. ತಮಿಳುನಾಡಿಗೆ ತೆರಳಿದಾಗ ತಮಿಳು ಮಾತನಾಡಲು ಬರದಿದ್ದರೂ ತಮಿಳು ಭಾಷೆಯ ನಾಲ್ಕು ಪದಗಳನ್ನಾದರೂ ಮಾತನಾಡುತ್ತೇನೆ. ಅದೇ ರೀತಿ ಬಂಗಾಳದಲ್ಲಿ ಬಂಗಾಳಿ ಭಾಷೆಯನ್ನೇ ಬಳಸಬೇಕು. ಈ ಮೂಲಕ ಬಂಗಾಳದಲ್ಲಿ ಬಂಗಾಳಿ ಭಾಷೆಯನ್ನು ಪ್ರಚಾರಪಡಿಸಬೇಕೆಂದು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ